ಮೈಸೂರು

ಸ್ವಚ್ಛ ನಗರಿ ಹೆಸರನ್ನು ಸದಾ ಉಳಿಸಿಕೊಂಡು ಹೋಗಬೇಕಿದೆ : ಮೇಯರ್ ರವಿಕುಮಾರ್

ಮೈಸೂರು ಈಗಾಗಲೇ ಎರಡು ಬಾರಿ ಸ್ವಚ್ಛ ನಗರಿ ಎಂದು ದೇಶದಲ್ಲೇ ಗುರುತಿಸಿಕೊಂಡಿದ್ದು, ಅದನ್ನು ಸದಾ ಉಳಿಸಿಕೊಳ್ಳುವ ಕಾರ್ಯ ನಡೆಯ ಬೇಕಿದೆ ಎಂದು ಮೈಸೂರು ಮಹಾನಗರಪಾಲಿಕೆ ಮೇಯರ್ ಎಂ.ಜೆ.ರವಿಕುಮಾರ್ ಕರೆ ನೀಡಿದರು.

ಮೈಸೂರಿನ ಹೊಯ್ಸಳ ಕರ್ನಾಟಕ ಸಂಘದಲ್ಲಿ ಚಿಲ್ಟ್ರನ್ಸ್ ಮೂವ್ ಮೆಂಟ್ ಫಾರ್ ಸಿವಿಕ್ ಅವೇರ್ ನೆಸ್ ಅಡಿ ಘನತ್ಯಾಜ್ಯ ನಿರ್ವಹಣೆ ಅಭಿಯಾನಕ್ಕೆ ಎಂ.ಜೆ.ರವಿಕುಮಾರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ನಮ್ಮ ನಗರವನ್ನು ಸ್ವಚ್ಛವಾಗಿ ಕಾಪಾಡಿಕೊಂಡು ಬರಬೇಕೆಂದರೆ ಮೊದಲು ನಮ್ಮ ಸುತ್ತ ಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆ ಮನೆಗೆ ಕಸವನ್ನು ಒಯ್ಯಲು ಬರುವ ಕಾರ್ಮಿಕರಿಗೆ ಒಣಕಸ, ಹಸಿಕಸವನ್ನು ಬೇರ್ಪಡಿಸಿ ನೀಡಿದಾಗ ಘನತ್ಯಾಜ್ಯ ನಿರ್ವಹಣೆ ತುಂಬಾ ಸುಲಭ ಎಂದು ತಿಳಿಸಿದರು.

ಒಂದು ಮನೆಯಲ್ಲಿ ಮಗುವಿಗೆ ಕಸವನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು ಎನ್ನುವುದನ್ನು ಕಲಿಸಿದರೆ ಅದರಿಂದ ನೂರು ಜನರಿಗೆ ಉಪಯೋಗವಾಗಲಿದೆ. ಯಾಕೆಂದರೆ ಆ ಮಗು ಅದನ್ನು ತನ್ನ ಸ್ನೇಹಿತರಿಗೆ ಪರಿಚಯದವರಿಗೆ ತಿಳಿಸಿಕೊಡಲಿದೆ ಎಂದರು.

ರಸ್ತೆಯಲ್ಲಿ ಕೆಲವರು ಎಲ್ಲೆಂದರಲ್ಲಿ ಕಸವನ್ನು ಬಿಸಾಡಿ ಹೋಗುತ್ತಾರೆ. ಮುಂದಿನ ದಿನಗಳಲ್ಲಿ ಅಂಥಹವರ ವಿರುದ್ಧ ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು ಎಂದರು.

ಈ ಸಂದರ್ಭ ಉಪಮೇಯರ್ ರತ್ನ ಲಕ್ಷ್ಮಣ್, ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವಪ್ಪ, ಪಾಲಿಕೆ ಆರೋಗ್ಯಾಧಿಕಾರಿ ರಾಮಚಂದ್ರಪ್ಪ, ಡಾ.ನಾಗರಾಜ್, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಪಿ.ವಿ.ಭಾರದ್ವಾಜ್ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಯಾವ ರೀತಿ ಕಸಗಳನ್ನು ಬೇರ್ಪಡಿಸಿ ನೀಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿಕೊಡಲಾಯಿತು. ಮೈಸೂರಿನ ವಿವಿಧ ಶಾಲೆಯ ವಿದ್ಯಾರ್ಥಿಗಳು  ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

Leave a Reply

comments

Related Articles

error: