
ಕರ್ನಾಟಕ
ಚಿಕ್ಕಬಳ್ಳಾಪುರ: ಕುಡಿಯುವ ನೀರಿನ ಪೈಪ್ ಗೆ ವಿಷ; 1100 ಮಂದಿ ಪಾರು
ಚಿಕ್ಕಬಳ್ಳಾಪುರ,ಮಾ.25-ಕುಡಿಯುವ ನೀರಿನ ಪೈಪ್ ಗೆ ವಿಷ ಬೆರೆಸಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ತಾಲಹಳ್ಳಿಯಲ್ಲಿ ನಡೆದಿದೆ.
ತಾಳಹಳ್ಳಿ ಗ್ರಾಮಕ್ಕೆ ಭಾನುವಾರ ಎಂದಿನಂತೆ ವಾಟರ್ಮ್ಯಾನ್ ನೀರು ಬಿಟ್ಟಿದ್ದಾರೆ. ಮಹಿಳೆಯರು ನೀರು ಹಿಡಿಯುವ ಸಂದರ್ಭದಲ್ಲಿ ನೀರು ವಿಚಿತ್ರ ವಾಸನೆ ಬರುತ್ತಿರುವುದನ್ನು ಗಮನಿಸಿದ್ದಾರೆ. ದ್ರಾಕ್ಷಿ ತೋಟಗಳಿಗೆ ಹಾಕುವ ಕೀಟನಾಶಕದ ವಾಸನೆ ಬಂದಿರುವುದರಿಂದ ಗ್ರಾಮಸ್ಥರು ಕೂಡಲೇ ವಾಟರ್ಮ್ಯಾನ್ಗೆ ವಿಷಯ ತಿಳಿಸಿ ನೀರು ನಿಲ್ಲಿಸಿದ್ದಾರೆ. ಇದರಿಂದ 1100 ಮಂದಿ ಅಪಾಯದಿಂದ ಪಾರಾಗಿದ್ದಾರೆ.
ತಕ್ಷಣ ಗ್ರಾಮದಲ್ಲಿರುವ ಓವರ್ ಹೆಡ್ ಟ್ಯಾಂಕಿನಲ್ಲಿ ಶೇಖರಣೆಯಾಗಿದ್ದ ನೀರು ಪರಿಶೀಲನೆ ಮಾಡಿದ್ದಾರೆ. ಆದರೆ ಟ್ಯಾಂಕ್ನಲ್ಲಿರುವ ನೀರಿಗೆ ವಿಷ ಬೆರೆತಿಲ್ಲ. ಊರಿನ ಸಮೀಪ ಇರುವ ಗೇಟ್ವಾಲ್ ತೆಗೆದು ಪೈಪ್ ಒಳಗಡೆ ವಿಷ ಹಾಕಿರುವುದು ಬೆಳಕಿಗೆ ಬಂದಿದೆ.
ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಗ್ರಾಮಕ್ಕೆ ಭೇಟಿ ನೀಡಿ ವಿಷಪೂರಿತ ವಾಸನೆ ಬರುತ್ತಿರುವ ನೀರನ್ನು ಬಾಟಲ್ನಲ್ಲಿ ಸಂಗ್ರಹಿಸಿ ಪರೀಕ್ಷೆಗಾಗಿ ಲ್ಯಾಬ್ಗೆ ಕಳುಹಿಸಲು ತೆಗೆದುಕೊಂಡು ಹೋಗಿದ್ದಾರೆ. ಕೆಲವರ ಮನೆಗಳ ಸಂಪ್ಗಳಲ್ಲಿ ತುಂಬಿದ್ದ ನೀರು ಕೂಡ ವಾಸನೆ ಬಂದಿರುವುದರಿಂದ ಸಂಪಿನಲ್ಲಿದ್ದ ನೀರನ್ನು ಹೊರ ಹಾಕಿ ಸ್ವಚ್ಛ ಮಾಡಲಾಗಿದೆ.
ಒತ್ತುವರಿ ದಾರರಿಂದ ಕೃತ್ಯ? ಗ್ರಾಮದಲ್ಲಿ 22 ಎಕರೆ ಸರ್ಕಾರಿ ಜಾಗ ಇದ್ದು, ಇದನ್ನು ಪ್ರಭಾವಿಗಳಾದ 9 ಮಂದಿ ಒತ್ತುವರಿ ಮಾಡಿಕೊಂಡಿದ್ದಾರೆ. ಇದೇ ಜಾಗದಲ್ಲಿ ಗ್ರಾಮ ಪಂಚಾಯಿತಿಯಿಂದ ಕೊಳವೆ ಬಾವಿ ಕೊರೆದು ಸುಮಾರು 300 ಮನೆಗೆ ನೀರು ಸರಬರಾಜು ಮಾಡಲಾಗುತ್ತಿದೆ. ಸರ್ಕಾರಿ ಕೊಳವೆ ಬಾವಿಯಿಂದ ಒತ್ತುವರಿ ಜಾಗಕ್ಕೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಕುಡಿಯುವ ನೀರಿನ ಪೈಪ್ಗೆ ಒತ್ತುವರಿದಾರರೇ ವಿಷ ಬೆರೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಹಿಂದೆ ಕೂಡ ದುಷ್ಕರ್ಮಿಗಳು ಕಬ್ಬಿಣದ ರಾಡ್ಗಳನ್ನು ಕೊಳವೆ ಬಾವಿಗೆ ತುಂಬಿಸಿ ನೀರು ಬಾರದಂತೆ ಮಾಡಿದ್ದ ಘಟನೆಯೂ ನಡೆದಿತ್ತು. ಈ ಜಾಗಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. (ಎಂ.ಎನ್)