ದೇಶ

ನಟಿ ಜಯಪ್ರದಾ ಬಿಜೆಪಿಗೆ?

ಲಕ್ನೋ,ಮಾ.25-ಸಮಾಜವಾದಿ ಪಕ್ಷದ ಮಾಜಿ ನಾಯಕಿ, ನಟಿ ಜಯಪ್ರದಾ ಬಿಜೆಪಿ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಂದು ಕಾಲದಲ್ಲಿ ತಮ್ಮ ಆಪ್ತರಾಗಿದ್ದ ಸಮಾಜವಾದಿ ಪಕ್ಷದ ಆಝಂ ಖಾನ್ ಅವರ ವಿರುದ್ಧವೇ ಜಯಪ್ರದಾ ಬಿಜೆಪಿ ಅಭ್ಯರ್ಥಿಯಾಗಿ ಉತ್ತರ ಪ್ರದೇಶದ ರಾಂಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.

ಜಯಪ್ರದಾ ಅವರು ಸಮಾಜವಾದಿ ಪಕ್ಷದಿಂದಲೇ ಎರಡು ಬಾರಿ (2004, 2009) ರಾಂಪುರದ ಸಂಸದೆಯಾಗಿ ಲೋಕಸಭೆ ಪ್ರವೇಶಿಸಿದ್ದರು. ಆದರೆ, 2010ರಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಜತೆಗಿನ ಕಿತ್ತಾಟದಿಂದಾಗಿ ರಾಜ್ಯ ಸಭಾ ಸದಸ್ಯ ಅಮರ್ ಸಿಂಗ್ ಜತೆಯಲ್ಲಿಯೇ ಜಯಪ್ರದಾ ಅವರನ್ನು ಎಸ್ ಪಿ ಉಚ್ಛಾಟಿಸಿತ್ತು.

ತೆಲಗುದೇಶಂ ಪಕ್ಷದ ಮೂಲಕ ರಾಜಕೀಯ ಬದುಕು ಆರಂಭಿಸಿದ್ದ ಜಯಪ್ರದಾ, ಎಸ್ಪಿ ಯಿಂದ ಉಚ್ಛಾಟನೆಗೊಂಡ ನಂತರ ಎನ್ ಡಿಎ ಯತ್ತ ಒಲವು ತೋರಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ವಿಧಾನವನ್ನು ಸದಾ ಶ್ಲಾಘಿಸುತ್ತ, ಬಿಜೆಪಿ ಸೇರುವ ಸೂಚನೆ ನೀಡಿದ್ದ ಜಯಪ್ರದಾ ಇಂದು ಬಿಜೆಪಿಗೆ ಅಧಿಕೃತವಾಗಿ ಸೇರುವುದು ಖಚಿತವಾಗಿದ್ದು, ರಾಂಪುರದಿಂದ ಸ್ಪರ್ಧೆಗಿಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕನ್ನಡ, ತೆಲುಗು, ಹಿಂದಿ ಸೇರಿದಂತೆ 70 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಜಯಪ್ರದಾ, ಅವರು 2014ರಲ್ಲಿ ರಾಷ್ಟ್ರೀಯ ಲೋಕದಳ ಟಿಕೆಟ್ ಪಡೆದು ಬಿಜ್ನೋರ್ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋತಿದ್ದರು.

ಲೋಕಸಭಾ ಚುನಾವಣೆ ಏ.11 ರಂದು ಆರಂಭವಾಗಲಿದ್ದು, ಏಳು ಹಂತಗಳಲ್ಲಿ ನಡೆಯಲಿದೆ. ಫಲಿತಾಂಶ ಮೇ.23 ರಂದು ಹೊರಬೀಳಲಿದೆ. (ಎಂ.ಎನ್)

Leave a Reply

comments

Related Articles

error: