ದೇಶಪ್ರಮುಖ ಸುದ್ದಿ

ಜಲ್ಲಿಕಟ್ಟು ವಿವಾದ: ಜ.31ರಂದು ಸುಪ್ರೀಂಕೋರ್ಟ್‍ನಿಂದ ಮತ್ತೆ ವಿಚಾರಣೆ

ನವದೆಹಲಿ: ತಮಿಳುನಾಡಿನ ಸಾಂಪ್ರದಾಯಿಕ ಗೂಳಿ ಬೆದರಿಸುವ ಆಟ ಜಲ್ಲಿಕಟ್ಟು ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಎಲ್ಲ ಅರ್ಜಿಗಳ ವಿಚಾರಣೆಯನ್ನು ಜ.31ರಂದು ಸುಪ್ರಿಂಕೋರ್ಟ್‍ ಮತ್ತೆ ಕೈಗೆತ್ತಿಕೊಳ್ಳಲಿದೆ.

ನ್ಯಾಯಮೂರ್ತಿ ದೀಪಕ್‍ ಮಿಶ್ರಾ ಅವರ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಪೀಠಕ್ಕೆ ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಮುಕುಲ್ ರೊಹ್ಟಗಿ ಅವರು ಮಾಹಿತಿ ನೀಡಿದ್ದು, ಕಳೆದ ವರ್ಷದ ಜನವರಿಯಲ್ಲಿ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ಕೇಂದ್ರ ಹಿಂಪಡೆಯುವ ನಿಟ್ಟಿನಲ್ಲಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಜಲ್ಲಿಕಟ್ಟು ತಮಿಳುನಾಡಿನ ಸಾಂಪ್ರದಾಯಿಕ ಆಚರಣೆಯಾಗಿದ್ದು, 2014ರಲ್ಲಿ ಸುಪ್ರಿಂಕೋರ್ಟ್‍ ನೀಡಿರುವ ತೀರ್ಪನ್ನು ರದ್ದುಪಡಿಸಬೇಕೆಂದು ಕಳೆದ ವರ್ಷದ ನವೆಂಬರ್ 16ರಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ವಿಚಾರಣೆ ಆಲಿಸಿದ್ದ ನ್ಯಾಯಮುರ್ತಿ ದೀಪಕ್‍ ಮಿಶ್ರಾ, ನ್ಯಾ.ರೊಹಿಂಟನ್ ಫಾಲಿ ನಾರಿಮನ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ತಮಿಳುನಾಡು ಸರ್ಕಾರದ ವಾದದಲ್ಲಿ ಪರಿಗಣಿಸಬಹುದಾದ ಯಾವುದೇ ಅಂಶವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿತ್ತು.

ಆದರೆ ಇದೇ 2017ರ ಜನವರಿಯ ಸಂಕ್ರಾಂತಿ ನಂತರ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಪರವಾದ ವ್ಯಾಪಕ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಜಲ್ಲಿಕಟ್ಟು ಆಚರಣೆಗೆ ಅನುಮತಿ ನೀಡಲು ಸಮಾಲೋಚನೆ ನಡೆಸಿದ್ದವು. ಜೊತೆಗೆ ಜ.23ರಂದು ಜಲ್ಲಿಕಟ್ಟು ಆಚರಣೆಗೆ ಅವಕಾಶ ಕಲ್ಪಿಸಲು ತಮಿಳುನಾಡು ವಿಧಾನಸಭೆಯಲ್ಲಿ ಜ.33ರಂದು ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿದೆ.

ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ ರಾವ್ ಅವರು ಜ.21ರಂದು ತಮಿಳುನಾಡು ಸರ್ಕಾರದ ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ. ಜಲ್ಲಿಕಟ್ಟು ಸಂಬಂಧ ಸುಪ್ರೀಂಕೋರ್ಟ್‍ನಲ್ಲಿ ಈವರೆಗೆ 69 ನಿರೀಕ್ಷಣಾ ಅರ್ಜಿಗಳು ಸಲ್ಲಿಕೆಯಾಗಿವೆ.

ಜಲ್ಲಿಕಟ್ಟುವಿನಂತೆ ಕರ್ನಾಟಕ ಕರಾವಳಿಯ ಕಂಬಳಕ್ಕೂ ಅವಕಾಶ ನೀಡಬೇಕೆಂಬ ಬೇಡಿಕೆಗಳು ಕೇಳಿಬಂದಿವೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜ.31ರ ಸುಪ್ರಿಂಕೋರ್ಟ್‍ ವಿಚಾರಣೆಯತ್ತ ಎಲ್ಲರ ಗಮನ ನೆಟ್ಟಿದೆ.

Leave a Reply

comments

Related Articles

error: