ಮೈಸೂರು

ಸಂಶೋಧನೆ ಜ್ಞಾನ ಮತ್ತು ಕಲಿಕಾ ಅನುಭವ ನೀಡಲಿದೆ : ಪ್ರೊ.ಎಸ್.ಇಂದುಮತಿ

ಮೈಸೂರು ವಿಶ್ವವಿದ್ಯಾನಿಲಯ ಯು.ಜಿ.ಸಿ-ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಹಾಗೂ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದ ವತಿಯಿಂದ ಶುಕ್ರವಾರ ಪದವಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಸಹಾಯಕ ಪ್ರಾಧ‍್ಯಾಪಕರಿಗಾಗಿ ವ್ಯವಸ್ಥೆಗೊಳಿಸಿರುವ  1 ನೇ ಕಲಾ ಮತ್ತು ಸಮಾಜ ವಿಜ್ಞಾನ ಸಂಶೋಧನಾ ವಿಧಾನ ಪುನಶ್ಚೇತನ ಶಿಬಿರವನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ವಿವಿ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದ ಅಧ‍್ಯಕ್ಷೆ ಹಾಗೂ ದಾವಣೆಗೆರೆ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಎಸ್.ಇಂದುಮತಿ ಸಂಶೋಧನೆ ಎಂದರೆ ಹೊಸತನದ ಹುಡುಕಾಟ. ಇಲ್ಲಿ ಹೊಸ ಹೊಸ ವಿಷಯಗಳು, ಆಲೋಚನೆಗಳು ನಮಗೆ ಸಿಗುತ್ತವೆ. ಸಂಶೋಧನೆ ಜ್ಞಾನ ಮತ್ತು ಕಲಿಕಾ ಅನುಭವವನ್ನು ನೀಡುತ್ತದೆ. ದೀರ್ಘಕಾಲೀನ ಅವಧಿಯಲ್ಲಿ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಮೂಲಾಧಾರಗಳನ್ನು ಸಂಗ್ರಹಿಸಿ, ಒಂದು ಶುದ್ಧ ಹಾಗೂ ಸ್ಪಷ್ಟವಾಗಿ ಸಿದ್ಧಪಡಿಸಿದ ಮಡಿವಂತಿಕೆಯ ಪ್ರತಿಫಲವೇ ಪಿಎಚ್.ಡಿ.  ಹಲವಾರು ಲೇಖನಗಳು, ವೃತ್ತಪತ್ರಿಕೆಗಳು, ದತ್ತಾಂಶಗಳ ಮೂಲಕ ಸಂಗ್ರಹಿಸಿದ ಮಾಹಿತಿಗಳು ಸಂಶೋಧನೆಗೆ ಸಹಕಾರಿಯಾಗುತ್ತವೆ. ಒಬ್ಬ ಉತ್ತಮ ಸಂಪನ್ಮೂಲ ವ್ಯಕ್ತಿಯಾಗಲು ಮತ್ತು ಉತ್ತಮ ಪ್ರಾಧ್ಯಾಪಕನಾಗಲು ಸಂಶೋಧನೆ ಉತ್ತಮ ಮಾರ್ಗವಾಗಿದೆ ಎಂದು ಹೇಳಿದರು.

ಕೇವಲ ಪರೀಕ್ಷಾ ದೃಷ್ಟಿಯಿಂದ ಮಾತ್ರ ಅಧ್ಯಯನ ನಡೆಸುವುದು ಸಂಶೋಧನೆಯಲ್ಲ. ಇಲ್ಲವೇ ಎಲ್ಲೋ ಸಿಕ್ಕಿದ ಅರೆಬರೆ ಮಾಹಿತಿಯನ್ನು ಕತ್ತರಿಸಿ ಅಂಟಿಸುವುದು ಸಂಶೋಧನೆಯಾಗಲಾರದು. ಯಾವುದೇ ಮಾಹಿತಿಯನ್ನಾಗಲೀ ಎಲ್ಲಿ ಎಷ್ಟನ್ನು ಯಾವ ಪ್ರಮಾಣದಲ್ಲಿ ಕತ್ತರಿಸಿ ಸೇರಿಸಬೇಕು ಎನ್ನುವ ಜಾಣ್ಮೆಯೂ ಸಹ ಇರಬೇಕು. ಮೂಲಾಧಾರಗಳನ್ನು ಮೂಲದಿಂದಲೇ ಹುಡುಕುವ ಹೊಸ ಪ್ರಯತ್ನ ಇಲ್ಲಿ ನಡೆಯಬೇಕು. ಜೊತೆಗೆ ಸಂಶೋಧನೆ ವ್ಯವಸ್ಥಿತವಾದ ರೂಪವನ್ನು ಪಡೆದಿರಬೇಕು. ಸಂಶೋಧಕನಾದವನಿಗೆ ತಾಳ್ಮೆ ಮತ್ತು ವಿಷಯದಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಗುಣ ಇರಬೇಕು. ಯಾವುದೇ ಕೆಲಸ ಕಾರ್ಯದ ಬಗ್ಗೆ ಕೇವಲ ಪುಸ್ತಕದಲ್ಲಿ ಓದಿದರೆ ಅದರ ಪ್ರಾಯೋಗಿಕತೆ ತಿಳಿಯುವುದಿಲ್ಲ. ಅದನ್ನು ನಮ್ಮ ಅನುಭವಕ್ಕೆ ತಂದುಕೊಳ‍್ಳಬೇಕು ಎಂದರು.

ಕೆಲವೊಂದು ವೇಳೆ ಲೇಖನಗಳು ಮತ್ತು ಪುಸ್ತಕಗಳಲ್ಲಿ ತಪ್ಪಾದ ಮಾಹಿತಿಯೂ ಸಹ ಇರುತ್ತದೆ. ಸಂಶೋಧಕರು ಗಮನವಹಿಸಿ ಅದರ ಶುದ್ಧತೆ ಮತ್ತು ನೈಜತೆಯನ್ನು ಕಾಪಾಡಬೇಕು. ಬರವಣಿಗೆ ಮೌಲ್ಯಯುತವಾಗಿರಬೇಕು. ಸಂಶೋಧನೆಯಲ್ಲಿ ಅಡ್ಡದಾರಿಯಲ್ಲಿ ಹೋಗಲು ಸಾಧ್ಯವಿಲ್ಲ. ಇಲ್ಲೇನಿದ್ದರೂ ರಾಜಪಥದಲ್ಲಿ ಸಾಗಬೇಕು. ಉತ್ತಮ ಗುಣಮಟ್ಟದ, ಹೊಸ ಆಲೋಚನೆಯ ಸಂಗ್ರಹವಾಗಿರಬೇಕು ಎಂದು ಹೇಳಿದರು.

ಯುಜಿಸಿ-ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ನಿರ್ದೇಶಕಿ ಪ್ರೊ.ಮಿಡತಲ ರಾಣಿ ಕಾರ್ಯಕ್ರಮದ ಅಧ‍್ಯಕ್ಷತೆ ವಹಿಸಿದ್ದರು. ಶಿಬಿರ ಸಂಯೋಜಕರಾದ ಪ್ರೊ.ಹೆಚ್.ಆರ್.ಉಮಾ, ಡಾ. ನಂಜುಂಡಸ್ವಾಮಿ ಉಪಸ್ಥಿತರಿದ್ದರು.

Leave a Reply

comments

Related Articles

error: