ಕರ್ನಾಟಕಮೈಸೂರು

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ವೇಳೆ ಜನಸಾಗರ!

ಮಂಡ್ಯ (ಮಾ.25): ಜೆಡಿಎಸ್ ಲೋಕಸಭೆ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಮವಾರ ನಾಮಪತ್ರ ಸಲ್ಲಿಸುವ ಮುನ್ನ ನಡೆಸಿದ ಬೃಹತ್ ಕಾರ್ಯಕರ್ತರ ಮೆರವಣಿಗೆ ಬಲಾಬಲ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ನಾಮಪತ್ರ ಸಲ್ಲಿಸುವ ದಿನ ಸೇರಿದ್ದ ಜನಸ್ತೋಮ ಕುರಿತು ಇದಕ್ಕೆ ಹತ್ತರಷ್ಟು ಜನರನ್ನು ಸೇರಿಸುವ ಸಾಮರ್ಥ್ಯ ತಮಗಿದೆ ಎಂಬ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಣೆಗೆ ಪ್ರತಿಕ್ರಿಯೆಯಂತೆ ಮೆರವಣಿಗೆ ಪ್ರತಿಫಲಿಸಿತು.

ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಜೆಡಿಎಸ್ ಕಾರ್ಯಕರ್ತರು, ಅವರು ಧರಿಸಿದ್ದ ಜೆಡಿಎಸ್ ಬಾವುಟ, ಬ್ಯಾನರ್ ಮೈಸೂರು-ಬೆಂಗಳೂರು ರಸ್ತೆಯಲ್ಲಿ ರಾರಾಜಿಸಿದವು. ತೆರೆದ ವಾಹನದಲ್ಲಿ ಗುಂಪುಗೂಡಿದ್ದ ಜೆಡಿಎಸ್ ಚಿಹ್ನೆ ಪೋಷಾಕು ಧರಿಸಿದ್ದ ಮಹಿಳೆಯರ ತಂಡದಿಂದ ನಡೆದ ನೃತ್ಯ ಪ್ರದರ್ಶನ ಮೆರವಣಿಗೆಗೆ ರಂಗು ತಂದಿತು. ಜೆಡಿಎಸ್ ಬಾವುಟ ಹಾರಾಡುತ್ತಿದ್ದ ನೂರಾರು ಎತ್ತಿನಗಾಡಿಗಳು, ಜಾನಪದ ಕಲಾ ತಂಡಗಳು ಮೆರವಣಿಗೆ ವಿಶೇಷವಾಗಿತ್ತು.

ಬೆಳಿಗ್ಗೆ 11.30ಕ್ಕೆ ಕಾಳಿಕಾಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಸ್ಥಳೀಯ ಜೆಡಿಎಸ್ ಮುಖಂಡರೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಆರಂಭಿಸಿದ ಅಭ್ಯರ್ಥಿ ನಿಖಿಲ್‍ಗೆ ತಂದೆ ಎಚ್.ಡಿ.ಕುಮಾರಸ್ವಾಮಿ, ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಜಿಲ್ಲೆಯ ಶಾಸಕರು ಸಾಥ್ ನೀಡಿದರು. ಕಾಂಗ್ರೆಸ್ ವತಿಯಿಂದ ಸಚಿವ ಡಿ.ಕೆ.ಶಿವಕುಮಾರ್ ಜೊತೆಗೂಡಿದರು. ಸಚಿವ ಎಚ್.ಡಿ.ರೇವಣ್ಣ, ತಾಯಿ ಅನಿತಾ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜೊತೆಯಾದರು.

ಮೆರವಣಿಗೆಯುದ್ದಕ್ಕೂ ನಿಖಿಲ್, ಸಿಎಂ ಪರ ಜೆಡಿಎಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. 11.30ಕ್ಕೆ ಆರಂಭವಾದ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಗೆ ತಲುಪುವಷ್ಟರಲ್ಲಿ ಮಧ್ಯಾಹ್ನ 2 ದಾಟಿತ್ತು. ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದರಿಂದ ಮೈಸೂರು-ಬೆಂಗಳೂರು ಹೆದ್ದಾರಿ ಸ್ಥಗಿತಗೊಂಡರೂ ಪ್ರಯಾಣಿಕರ ಪರದಾಟ ತಪ್ಪಿತು. ಆದರೂ ಸ್ಥಳೀಯರು ಸಂಚಾರ ವ್ಯವಸ್ಥೆ ಅಸ್ತವ್ಯಸ್ತೆಯ ಪರಿಣಾಮ ಎದುರಿಸುವಂತಾಯಿತು. ಎಸ್‍ಪಿ, 10 ಡಿವೈಎಸ್‍ಪಿ, 20 ಸಿಪಿಐ, 35 ಪಿಎಸ್‍ಐ, 500 ಸಿಬ್ಬಂದಿ, 5 ಡಿಆರ್ ಸಿಬ್ಬಂದಿ, 5 ಕೆಎಸ್‍ಆರ್‍ಪಿ ತುಕಡಿಯೊಂದಿಗೆ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮೆರವಣಿಗೆ ನಂತರ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರಿಗೆ ನಿಖಿಲ್ ನಾಮಪತ್ರ ಸಲ್ಲಿಸಿದರು. ತಾಯಿ ಅನಿತಾ, ದೊಡ್ಡಪ್ಪ ಎಚ್.ಡಿ.ರೇವಣ್ಣ, ಸಚಿವರಾದ ಡಿ.ಕೆ.ಶಿವಕುಮಾರ್, ಸಿ.ಎಸ್.ಪುಟ್ಟರಾಜು ಸಾಥ್ ನೀಡಿದರು. (ಎನ್.ಬಿ)

Leave a Reply

comments

Related Articles

error: