
ಪ್ರಮುಖ ಸುದ್ದಿಮೈಸೂರು
ಬಿಜೆಪಿ ಮುಖಂಡರ ಶಿತಲ ಸಮರ : ನೋ ಕಮೆಂಟ್ಸ್ ಎಂದ ಸಂಸದೆ ಶೋಭಾ ಕರಂದ್ಲಾಜೆ
ನೋ ಕಮೆಂಟ್ಸ್… ನೋ ಕಮೆಂಟ್ಸ್… ಪತ್ರಕರ್ತರ ಪ್ರಶ್ನೆಗೆ ಹೀಗೊಂದು ಉದ್ಘಾರ ತೆಗೆದದ್ದು ಮಾಜಿ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆಯವರು.
ರಾಜ್ಯ ಬಿಜೆಪಿ ಮುಖಂಡರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ನಡುವೆ ನಡೆಯುತ್ತಿರುವ ಶಿತಲ ಸಮರದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸದೇ ನಯವಾಗಿ ನುಣುಚಿಕೊಂಡು ಆ ಬಗ್ಗೆ ಮಾತನಾಡುವ ಹಕ್ಕು ನನಗಿಲ್ಲ. ಇಂದು ಸಂಜೆ (ಜ.27) ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ತಲೆದೋರಿರುವ ಎಲ್ಲಾ ಗೊಂದಲಗಳಿಗೂ ತೆರೆ ಬೀಳುವ ವಿಶ್ವಾಸವಿದೆ ಎಂದರು.
ನನ್ನ ರಾಜೀನಾಮೆ ತೆಗೆದುಕೊಳ್ಳುವ ಪರಿಸ್ಥಿತಿ ಸರ್ಕಾರಕ್ಕೆ ಎದುರಾದರೆ ಇಡೀ ಮಂತ್ರಿಮಂಡಲದ ಎಲ್ಲಾ ಸಚಿವರು ರಾಜೀನಾಮೆ ನೀಡಬೇಕಾಗುವುದೆಂದು ಸಚಿವ ರಮೇಶ್ ಜಾರಕಿಹೊಳಿಯವರು ಬಹಿರಂಗ ಹೇಳಿಕೆ ನೀಡಿರುವುದು ಹಾಗೂ ಜಯಚಂದ್ರ, ಚಿಕ್ಕರಾಯಪ್ಪನವರ ಪ್ರಕರಣಗಳಿಂದ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ಬರಿಗಣ್ಣಿಗೇ ಕಾಣುವಂತಿದೆ. ರಾಜಕಾರಣಿಗಳಿಗೆ ಬರುವ ಅನುದಾನ ನೇರವಾಗಿ ಭ್ರಷ್ಟಾಚಾರಿಗಳ ಕೈಸೇರುತ್ತಿದೆ ಎಂದು ದೂಷಿಸಿದರು. ರಾಜ್ಯದಲ್ಲಿ ನಡೆಯುತ್ತಿರುವ ಆದಾಯ ತೆರಿಗೆ ಅಧಿಕಾರಿಗಳ ದಾಳಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ನೋಟು ಅಮಾನ್ಯಗೊಂಡ ನಂತರ ಲೆಕ್ಕವಿಲ್ಲದ ಹೊಸ ನೋಟುಗಳ ಸಂಗ್ರಹಿಸಿರುವ ಮಾಹಿತಿ ಬಂದೆಡೆ ಹಾಗೂ ಅನುಮಾನಸ್ಪದ ವ್ಯವಹಾರ ನಡೆಸುತ್ತಿರುವ ಕಡೆ ದಾಳಿ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.