
ಪ್ರಮುಖ ಸುದ್ದಿಮೈಸೂರು
ನಾಮಪತ್ರ ಸಲ್ಲಿಕೆ ವೇಳೆ ನಿಷೇಧಾಜ್ಞೆ ಜಾರಿಯಲ್ಲಿದ್ದ ಪ್ರದೇಶದಲ್ಲಿ ವಾಹನ ಒಳನುಗ್ಗಿಸಿ ದರ್ಪ ಮೆರೆದ ಸಚಿವ ಸಾ.ರಾ.ಮಹೇಶ್ : ಪ್ರಶ್ನಿಸಿದ ಹೆಡ್ ಕಾನ್ಸಟೇಬಲ್ ಅಮಾನತು
ಮೈಸೂರು,ಮಾ.26:- ಲೋಕಸಭಾ ಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ನಿಷೇಧಾಜ್ಞೆ ಜಾರಿಯಲ್ಲಿದ್ದ ಪ್ರದೇಶದಲ್ಲಿ ಖಾಸಗಿ ವಾಹನ ತಂದು ಒಳಗೆ ಪ್ರವೇಶಿಸಿದ್ದನ್ನು ಪ್ರಶ್ನೆ ಮಾಡಿದ್ದನ್ನೇ ನೆಪವಾಗಿಟ್ಟುಕೊಂಡ ಸಚಿವ ಸಾ.ರಾ.ಮಹೇಶ್ ಅವರು ಮುಖ್ಯಪೇದೆಯೋರ್ವರ ಅಮಾನತಿಗೆ ಕಾರಣರಾಗಿ ದರ್ಪ ಮೆರೆದಿದ್ದಾರೆ.
ನಿನ್ನೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯ್ ಶಂಕರ್ ಅವರ ನಾಮಪತ್ರ ಸಲ್ಲಿಕೆಯಿತ್ತು. ಈ ವೇಳೆ ಸಚಿವ ಸಾ.ರಾ.ಮಹೇಶ್ ಅವರು ಅರಸು ರೋಡ್ ಜಂಕ್ಷನ್ ನಲ್ಲಿ ಖಾಸಗಿ ವಾಹನದಲ್ಲಿ ಬಂದಿದ್ದಾರೆ. ಅಲ್ಲಿ ನಿಷೇಧಾಜ್ಞೆ ಜಾರಿಯಲ್ಲಿತ್ತು. ಈ ವೇಳೆ ಅಲ್ಲಿ ಕರ್ತವ್ಯ ನಿರತರಾಗಿದ್ದ ಕುವೆಂಪುನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ವೆಂಕಟೇಶ್ ಅವರು ವಾಹನ ಒಳಗೆ ಬರುತ್ತಲೇ ಯಾರು ಎನ್ನುವುದು ತಿಳಿಯದ ಕಾರಣ ಸಚಿವರನ್ನು ಪ್ರಶ್ನಿಸಿದ್ದಾರೆ. ಮತ್ತೆ ನೇರವಾಗಿ ದಿಟ್ಟಿಸಿದ್ದಾರೆ. ಇದನ್ನೇ ನೆಪವಾಗಿಟ್ಟುಕೊಂಡ ಸಚಿವ ಸಾ.ರಾ.ಮಹೇಶ್ ಅವರು ನಗರ ಪೊಲೀಸ್ ಆಯುಕ್ತರಿಗೆ ಫೋನಾಯಿಸಿ ವೆಂಕಟೇಶ್ ಅವರನ್ನು ಅಮಾನತುಗೊಳಿಸುವಂತೆ ಆದೇಶಿಸಿದ್ದಾರೆ ಎನ್ನಲಾಗಿದೆ.
ಕಾನೂನು ಎಲ್ಲರಿಗೂ ಒಂದೇ, ಅವನು ಮಂತ್ರಿಯೇ ಆಗಿರಲಿ, ನಾಗರಿಕನಾಗಿರಲಿ. ಕಾನೂನು ಪಾಲನೆ ಮಾಡಬೇಕು ಎಂದರೆ ಎಲ್ಲರೂ ಪಾಲನೆ ಮಾಡಲೇಬೇಕು. ಕಾನೂನು ಪಾಲನೆ ಮಾಡಲು ಸಾಧ್ಯವಿಲ್ಲ ಎಂದಮೇಲೆ ಕಾನೂನು ಯಾತಕ್ಕೆ ಬೇಕು, ಈ ಪೊಲೀಸ್ ಸುವ್ಯವಸ್ಥೆಗಳೆಲ್ಲ ಯಾಕೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಚಿವ ಸಾ.ರಾ.ಮಹೇಶ್ ಅವರು ಪೊಲೀಸ್ ಅಧಿಕಾರಿಗಳ ಮೇಲೆ ದರ್ಪ ಮೆರೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ತುಮಕೂರು ಸಿದ್ದಗಂಗಾಮಠದ ಶಿವಕುಮಾರಸ್ವಾಮೀಜಿಯವರು ಲಿಂಗೈಕ್ಯರಾದ ಸಮಯದಲ್ಲಿ ಕೂಡ ಮಠದೊಳಗೆ ಪ್ರವೇಶಿಸುವ ವೇಳೆ ಅಲ್ಲಿ ನಿಯೋಜನೆಗೊಂಡಿದ್ದ ಮಹಿಳಾ ಪೊಲೀಸ್ ಅಧಿಕಾರಿಯೋರ್ವರ ಮೇಲೆ ದರ್ಪ ಮೆರೆದು ಅವರ ಕಣ್ಣಲ್ಲಿ ನೀರು ಹಾಕಿಸಿದ್ದರು. ಈ ವಿಷಯ ತೀವ್ರ ಟೀಕೆಗೆ ಗುರಿಯಾಗಿತ್ತು. ಇದೀಗ ಚುನಾವಣೆಯ ವೇಳೆ ಮತ್ತೆ ಪೊಲೀಸ್ ಮುಖ್ಯಪೇದೆಯೋರ್ವರನ್ನು ಅಮಾನತುಗೊಳಿಸಿ ದರ್ಪ ಮೆರೆದಿದ್ದಾರೆ. (ಕೆ.ಎಸ್,ಎಸ್.ಎಚ್)