ಕರ್ನಾಟಕದೇಶಪ್ರಮುಖ ಸುದ್ದಿ

ಕೋಲಾರ ಚಿನ್ನದ ಗಣಿಗೆ ಮರುಜೀವ : ಕೇಂದ್ರ ಸರ್ಕಾರ ಚಿಂತನೆ

ನವದೆಹಲಿ: ಕೇಂದ್ರ ಸರ್ಕಾರವು ಬ್ರಿಟಿಷ್ ಕಾಲದ ಚಿನ್ನದ ಗಣಿಗೆ ಮರುಜೀವ ನೀಡಲು ನಿರ್ಧರಿಸಿದೆ. ವಿಶ್ವದಲ್ಲಿ ಭಾರತ ಎರಡನೇ ಅತಿದೊಡ್ಡ ಚಿನ್ನ ಆಮದು ಮಾಡಿಕೊಳ್ಳವ ದೇಶವಾಗಿದ್ದು, ಹಳದಿ ಲೋಹದ ಆಮದಿನಿಂದಾಗಿ ಆಮದು ಮತ್ತು ರಫ್ತು ನಡುವಿನ ಮೌಲ್ಯದಲ್ಲಿ ಭಾರೀ ಅಂತರ ಉಂಟಾಗುತ್ತಿದೆ.

ವಿದೇಶಿ ವಿನಿಮಯ ಸಂಗ್ರಹಿಸಲು ಅತಿಯಾದ ಚಿನ್ನ ಆಮದು ಪ್ರಕ್ರಿಯೆ ಪ್ರಮುಖ ಅಡ್ಡಿಯಾಗಿದ್ದು, ಆಮದು ಮತ್ತು ರಫ್ತು ಮೌಲ್ಯದ ಅಂತರ ಕಡಿಮೆಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚಿನ್ನದ ಗಣಿ ಪುನರುಜ್ಜೀವನಗೊಳಿಸುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ಈ ನಿಟ್ಟಿನಲ್ಲಿ ಎಸ್‍ಬಿಐ ಕ್ಯಾಪಿಟಲ್ ಸಂಸ್ಥೆಗೆ ಸೂಚನೆ ನೀಡಲಾಗಿದ್ದು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ಕೆಜಿಎಫ್‍ ಭಾರತ್ ಗೋಲ್ಡ್ ಮೈನ್ಸ್ ಹಣಕಾಸು ಸ್ಥಿತಿಗತಿ ತಿಳಿಯಲು ಕೇಂದ್ರ ಸರ್ಕಾರ ಮುಂದಾಗಿದೆ. ಚಿನ್ನದ ಗಣಿ ಮುಚ್ಚುವ ಮೊದಲು ಕಾರ್ಯಪ್ರವೃತ್ತವಾಗಿದ್ದ ನೌಕರರ ಬಾಕಿ ಮತ್ತು ಕಂಪನಿಯ ಹಣಕಾಸು ಪರಿಸ್ಥಿತಿ ವಿವರಿಸುವ ವಾಸ್ತವ ವರದಿ ನೀಡಲು ಕೇಂದ್ರ ಸರ್ಕಾರ ಸೂಚಿಸಿದೆ.

ಭಾರತದ ಕೌಟುಂಬಿಕ ವ್ಯವಸ್ಥೆಯಲ್ಲಿ ಚಿನ್ನವನ್ನು ಉಳಿತಾಯದ ಸಾಧನವಾಗಿ ಪರಿಗಣಿಸಲಾಗಿದೆ. ಚಿನ್ನವನ್ನು ಭಾರತೀಯ ಸಂಸ್ಕೃತಿಯಲ್ಲಿ ಪವಿತ್ರ ಸಂದರ್ಭದಲ್ಲಿ ಉಡುಗೊರೆಯಾಗಿಯೂ ನೀಡಲಾಗುತ್ತದೆ.

ಭಾರತದಲ್ಲಿ ಜನರು ಮಾತ್ರವಲ್ಲದೆ ದೇವರಿಗೂ ಚಿನ್ನ ಹರಕೆ ನೀಡುವ ಪರಿಪಾಠವಿದೆ. ಹಬ್ಬ-ಹರಿದಿನ-ಮದುವೆ ಸಂದರ್ಭದಲ್ಲಿ ಭಾರತದಲ್ಲಿ ಚಿನ್ನದ ಅಗತ್ಯತೆ ಪ್ರಮಾಣ ಬಹಳ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭ ಭಾರತದಲ್ಲಿ ಚಿನ್ನದ ಬೇಡಿಕೆ ಹೆಚ್ಚಾದಾಗ ಜಾಗತಿಕ ಚಿನ್ನದ ದರದಲ್ಲೂ ಏರುಪೇರಾಗುವ ಸಾಧ್ಯತೆ ಇದೆ.

ದೇಶಿಯ ಚಿನ್ನದ ಗಣಿಗಳಿಗೆ ಪುನರುಜ್ಜೀವನ ನೀಡುವ ಮೂಲಕ ದೇಶದ ಆಂತರಿಕ ಚಿನ್ನದ ಅಗತ್ಯತೆಯನ್ನು ಪೂರೈಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಈ ಮೂಲಕ ಚಿನ್ನದ ಆಮದು ಪ್ರಮಾಣವನ್ನು ಸಾಕಷ್ಟು ನಿಯಂತ್ರಿಸಬಹುದು – ಆ ಮೂಲಕ ದೇಶದ ಆರ್ಥಿಕ ಸ್ಥಿತಿಗತಿ ಸುಧಾರಿಸಬಹುದು ಎಂಬುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.

ಎಷ್ಟು ಪ್ರಯೋಜನಕಾರಿ :

ಭಾರತ ಪ್ರತಿವರ್ಷ ಕನಿಷ್ಠ 900 ಟನ್‍ನಿಂದ 1000 ಟನ್‍’ವರೆಗೆ ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದೆ. ದೇಶೀಯ ಚಿನ್ನದ ಉತ್ಪಾದನೆ ಕೇವಲ 2 ರಿಂದ 3 ಟನ್‍ಗಳ ವರೆಗೆ ಮಾತ್ರ ಇದೆ. ಹೀಗಾಗಿ ಕೇಂದ್ರ ಸರ್ಕಾರದ ಉದ್ದೇಶಕ್ಕೆ ಎಷ್ಟರಮಟ್ಟಿಗೆ ಸಹಾಯವಾಗಬಹುದು ಎಂಬುದೂ ಪ್ರಶ್ನೆಯಾಗಿದೆ. ಕೋಲಾರ ಚಿನ್ನದ ಗಣಿಯ ಜೊತೆಗೆ ಇತರ ಇನ್ನಷ್ಟು ದೇಶಿಯ ಚಿನ್ನದ ಗಣಿಗಳು ಸಕ್ರಿಯವಾದವರೆ ಮಾತ್ರ ಭಾರತದ ಚಿನ್ನದ ಅಗತ್ಯತೆ ಪೂರೈಸುವ ನಿಟ್ಟಿನಲ್ಲಿ ಉಪಕಾರಿಯಾಗಬಹುದು.

Leave a Reply

comments

Related Articles

error: