ಕರ್ನಾಟಕಪ್ರಮುಖ ಸುದ್ದಿ

ಡಿಕೆಶಿ ಕಾಲಿಗೆರಗಿದ ನಿಖಿಲ್ ಕುಮಾರಸ್ವಾಮಿ; ಕಪಟವಿಲ್ಲದ ಮನಸ್ಸು ಎಂದ ಮುನಿರತ್ನ!

ಸ್ಥಳೀಯ ಮುಖಂಡರ ಒತ್ತಡದ ಕಾರಣ ಮಂಡ್ಯದಿಂದ ಸ್ಪರ್ಧೆ; ಅಂಬರೀಷ್ ಸಮಾಧಿಗೆ ಜಾಗ ಗುರುತಿಸಿದ್ದೇ ನಿಖಿಲ್!

ಮಂಡ್ಯ (ಮಾ.25): ಇಂದು ನಿಖಿಲ್​ ರಾಜಕೀಯ ಪ್ರವೇಶದ ದಿನ. ಸುವರ್ಣಾಕ್ಷರದಲ್ಲಿ ಬರೆಯಬೇಕಾದ ದಿನ ಇಂದು. ನಿಖಿಲ್​ರದ್ದು ಮೋಸ ಕಪಟ ಗೊತ್ತಿಲ್ಲದ ಮುಗ್ಧ ಮನಸ್ಸು ಎಂದು ಮುನಿರತ್ನ ಹಾಡಿ ಹೊಗಳಿದರು. ಸ್ವತಂತ್ರ ಅಭ್ಯರ್ಥಿ ಸುಮಲತಾ ಅವರಿಗೆ ಕನ್ನಡ ಸಿನಿ ರಂಗದ ನಟರು ಬೆಂಬಲ ನೀಡುತ್ತಿರುವುದರ ಬಗ್ಗೆ ಪರೋಕ್ಷವಾಗಿ ತಿವಿದ ಅವರು, ನಮ್ಮ ಬಳಿಯೂ ಇಬ್ಬರು ಸ್ಟಾರ್​ಗಳಿದ್ದಾರೆ. ಅದು ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್​. ಇವರಿಗಿಂತ ಬೇರೆ ಸ್ಟಾರ್ಸ್​ ಬೇಕಾ ಎಂದು ಕಾಂಗ್ರೆಸ್ ನಾಯಕರೂ ಆದ ಮುನಿರತ್ನ ಕೇಳಿದರು.

ಅಂಬರೀಷ್​ ತೀರಿ ಹೋದಾಗ ಅವರ ಸಮಾಧಿಗೆ ಜಾಗ ಗುರುತಿಸಿದ್ದು ನಿಖಿಲ್​ ಕುಮಾರಸ್ವಾಮಿ. ಈ ಕುರಿತು ಮಧ್ಯರಾತ್ರಿ 2 ಗಂಟೆಗೆ ನನ್ನ ಬಳಿ ಹೇಳಿದರು ಎಂದು ಶಾಸಕ, ನಿರ್ಮಾಪಕ ಮುನಿರತ್ನ ತಿಳಿಸಿದರು. ಮೈತ್ರಿ ಅಭ್ಯರ್ಥಿಯಾಗಿ ಇಂದು ನಿಖಿಲ್​ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ಬಳಿಕ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಿಖಿಲ್​ಗಿಂತ ಬೇರೆ ನಾಯಕರು ಯಾಕೆ ಬೇಕು ಎಂದು ಜನರನ್ನೇ ಪ್ರಶ್ನಿಸಿದರು.

ನಿಖಿಲ್ ಎಲ್ಲಿ ಬೇಕಾದರೂ ಸ್ಪರ್ಧಿಸಬಹುದಿತ್ತು. ಸ್ಥಳೀಯ ಮುಖಂಡರ ಒತ್ತಡದ ಮೇರೆಗೆ ಮಂಡ್ಯದಿಂದ ಸ್ಪರ್ಧಿಸಲು ಅವರು ಮುಂದಾದರು. ಆವೇಶದಲ್ಲಿ, ಕೋಪದಲ್ಲಿ, ದ್ವೇಷದಿಂದ ನಿರ್ಧಾರ ತೆಗೆದುಕೊಂಡಿಲ್ಲ. ಇದು ನಿಖಿಲ್ ಮತ್ತು ಸುಮಲತಾ ನಡುವಿನ ಚುನಾವಣೆ ಅಲ್ಲ. ಮೋದಿ, ಯಡಿಯೂರಪ್ಪ, ದೇವೇಗೌಡರ ನಡುವೆ ನಡೆಯುತ್ತಿರುವ ಚುನಾವಣೆ ಎಂದು ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟರು.

ಸುಮಲತಾ ನನ್ನ ಬಳಿ ಬಂದಿದ್ದರು. ಸಿದ್ದರಾಮಯ್ಯ ಬಳಿ ಹೋಗಿದ್ದರು. ಮಂಡ್ಯ ಕ್ಷೇತ್ರ ಜೆಡಿಎಸ್​ಗೆ ಬಿಟ್ಟುಕೊಟ್ಟಾಗಿದೆ. ಬೆಂಗಳೂರು ಅಥವಾ ಮೈಸೂರಿನಲ್ಲಿ ನಿಲ್ಲಿ ಎಂದು ಹೇಳಿದ್ದೆವು. ರಾಜ್ಯಸಭಾ ಸದಸ್ಯರನ್ನಾಗಿ ಮಾಡುತ್ತೀವಿ. ಕ್ಷೇತ್ರ ಬಿಡಿ ಎಂದೆವು. ಆದರೆ, ಸುಮಲತಾ ಅವರ ಹಿಂದೆ ಯಾರದ್ದೋ ಕೈವಾಡ ಇದೆ. ಆದರೆ ಇದರ ಕೀಲಿ ಕೈ ಜನರ ಬಳಿ ಇದೆ ಎಂಬುದು ಮರೆಯಬೇಡಿ ಎಂದು ಡಿಕೆಶಿ ಎಚ್ಚರಿಕೆ ನೀಡಿದರು.

ಕುಮಾರಸ್ವಾಮಿ ಸರ್ಕಾರ ರಾಜ್ಯಕ್ಕೆ ಬೇಕು ಎಂದು ಅಂಬರೀಷ್ ಹೇಳಿದ್ದರು. ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತಂದಿದ್ದು ಕುಮಾರಸ್ವಾಮಿ ಅವರೆಯೇ. ಸಿದ್ದರಾಮಯ್ಯ, ನಾನು ಸೇರಿ ಕುಮಾರಸ್ವಾಮಿ ಸರ್ಕಾರ ಆಗ್ಬೇಕು ಎಂದು ರಾಜ್ಯಪಾಲರ ಬಳಿ ಹೋಗಿದ್ದೆವು. ಇದಕ್ಕೆ ಅಂಬರೀಷ್ ಕೂಡ ಆಶೀರ್ವಾದ ಮಾಡಿದ್ದರು. ಅಂಬರೀಷ್ ಆತ್ಮಕ್ಕೆ ಶಾಂತಿ ಸಿಗಬೇಕು ಅಂದರೆ ನಿಖಿಲ್​ಗೆ ಓಟ್ ಹಾಕಬೇಕು ಎಂದು ಡಿಕೆಶಿ ಕರೆ ನೀಡಿದರು.

ಈ ದೇಶದಲ್ಲಿ ಬದಲಾವಣೆಗಾಗಿ ನಿಂತಿದ್ದೇವೆ. ಸಿಎಂ ಮಾಡಿ ಎಂದು ಕುಮಾರಸ್ವಾಮಿ ನಮ್ಮನ್ನು ಕರೆದಿರಲಿಲ್ಲ. ಕಾಂಗ್ರೆಸ್ ನಾಯಕರೆಲ್ಲ ಸೇರಿ ಯಾವುದೇ ಕಂಡೀಷನ್ ಹಾಕದೆ ಸಿಎಂ ಮಾಡಿದ್ದೇವೆ. ಕಾಂಗ್ರೆಸ್ 80 ಶಾಸಕರಿದ್ದರೂ ಬೇಷರತ್​ ಬೆಂಬಲ ಕೊಟ್ಟಿದ್ದೇವೆ. ಕೊಟ್ಟ ಮಾತನ್ನ ಕೈ ನಾಯಕರು ವಾಪಸ್ ತೆಗೆದುಕೊಳ್ಳುವ ಪ್ರಶ್ನೆ ಉದ್ಭವ ಆಗಲ್ಲ ಎಂದು ಸಚಿವ ಡಿಕೆಶಿ ಭರವಸೆ ನಿಡದರು.

ಉಪ ಚುನಾವಣೆಯಲ್ಲಿ ಶಿವರಾಮೇಗೌಡರನ್ನ ಅಭ್ಯರ್ಥಿಯನ್ನಾಗಿ ಮಾಡಿದ್ದೆವು. ಸಿದ್ದರಾಮಯ್ಯ ಆದಿಯಾಗಿ ನಾವೆಲ್ಲ ಬೆಂಬಲಿಸಿದೆವು. ಉಪಚುನಾವಣೆಯಲ್ಲಿ ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಿದೆವು. ಈಗಲೂ ನಾವು ಒಟ್ಟಾಗಿ ನಿಖಿಲ್​ ಗೆಲುವಿಗೆ ಮುಂದಾಗುತ್ತೇವೆ ಎಂದವರು ಆಶ್ವಾಸನೆ ನೀಡಿದರು.

ನಾನು ವ್ಯಕ್ತಿ ಪೂಜೆ ಮಾಡಲ್ಲ. ಪಕ್ಷದ ಪೂಜೆ ಮಾಡುತ್ತೇನೆ. ಸೋನಿಯಾ, ರಾಹುಲ್ ಅವರು ಕೊಟ್ಟ ಮಾತನ್ನ ವಾಪಸ್ ಪಡೆಯಲ್ಲ. ನಿಖಿಲ್ ಅವರನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ. ತೆನೆಹೊತ್ತ ಹೆಣ್ಣುಮಗಳ ಗುರುತಿಗೆ ಮತ ಹಾಕಿ ಎಂದು ಜನರೆದುರು ಡಿಕೆ ಶಿವಕುಮಾರ್ ಮನವಿ ಮಾಡಿದರು. ಈ ವೇಳೆ ಅಲ್ಲಿಯೇ ಡಿಕೆ ಶಿವಕುಮಾರ್​ ಕಾಲಿಗೆ ಮಂಡಿಯೂರಿ ನಿಖಿಲ್​ ನಮಸ್ಕರಿಸಿ ಆಶೀರ್ವಾದ ಪಡೆದರು. (ಎನ್.ಬಿ)

Leave a Reply

comments

Related Articles

error: