ಮೈಸೂರು

‘ಸ್ವಚ್ಛ ಮೈಸೂರು-ಸ್ವಸ್ಥ ಜೀವನ’ ರಾಮಕೃಷ್ಣಾಶ್ರಮದಿಂದ ಜನಾಂದೋಲನ; ಜ.29ಕ್ಕೆ ಚಾಲನೆ

ಕೇಂದ್ರ ಸರ್ಕಾರದ ಮಹದ್ದೋದೇಶದ ಸ್ವಚ್ಛ ಭಾರತ ಯೋಜನೆಯಲ್ಲಿ ಮೈಸೂರಿನ ರಾಮಕೃಷ್ಣ ಮಿಶನ್‍ “ಸ್ವಚ್ಛ ಮೈಸೂರು-ಸ್ವಸ್ಥ ಜೀವನ” ಜನಾಂದೋಲನವನ್ನು ಇದೇ ಜ.29ರಿಂದ ಆರಂಭಿಸಲಾಗುತ್ತಿದ್ದು ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು 40 ಭಾನುವಾರಗಳನ್ನು ಮೀಸಲಿಡಲಾಗಿದೆ ಎಂದು ಆಶ್ರಮದ ಮೋಕ್ಷಾತ್ಮಾನಂದ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಅಭಿಯಾನಕ್ಕೆ ಭಾನುವಾರ ಬೆಳಿಗ್ಗೆ 7ಕ್ಕೆ ಮಂಜುನಾಥಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಾಗುವುದು. ಮಹಾಪೌರ ಎಂ.ಜೆ.ರವಿಕುಮಾರ್, ಶಾಸಕ ವಾಸು, ಎಂ.ಎಲ್‍.ಸಿ. ಡಿ.ಮಾದೇಗೌಡ, ಪಾಲಿಕೆ ಸದಸ್ಯೆ ಅನಸೂಯ, ಪಾಲಿಕೆ ಆಯುಕ್ತ ಜಗದೀಶ್ ಅವರೂ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಆಶ್ರಮದ ಹಿರಿಯ ಸನ್ಯಾಸಿ ಸ್ವಾಮಿ ನಿತ್ಯಸ್ಥಾನಂದಜೀಯವರು ಸಾನಿಧ್ಯ ವಹಿಸುವರು ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಸ್ವಚ್ಛತೆ ಆಂದೋಲನದ ಬಗ್ಗೆ ಆಶ್ರಮದಿಂದ ವ್ಯಾಪಕ ಪ್ರಚಾರ ನೀಡಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಬೆಂಬಲ ಹಾಗೂ ಪ್ರೋತ್ಸಾಹ ಲಭಿಸಿದೆ. ಮಹಾರಾಜ ಕಾಲೇಜಿನ ಸಹಯೋಗದಲ್ಲಿ ನಡೆಸುವ ಸ್ವಚ್ಛತಾ ಆಂದೋಲನವು ಜನಾಂದೋಲನವಾಗಿ ಮಾರ್ಪಡುತ್ತಿದ್ದು, ಸ್ವಯಂ ಪ್ರೇರಣೆಯಿಂದ ಈಗಾಗಲೇ 150 ಸ್ವಯಂ ಸೇವಕರು ಅಭಿಯಾನದಲ್ಲಿ ಜೊತೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ನಿಗದಿತ ಬಡಾವಣೆಗಳಲ್ಲಿ, ಶಾಲೆಗಳಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸಲಾಗುವುದು ಹಾಗೂ ಸ್ವಯಂ ಸೇವಕರನ್ನು ಸೇರ್ಪಡೆಗೊಳಿಸಲಾಗುವುದು ಎಂದರು. “ರೆಫ್ಯೂಜ಼್, ರೆಡ್ಯೂಜ಼್, ರೀ-ಯೂಸ್ ಮತ್ತು ರೀ-ಸೈಕಲ್‍” ಎನ್ನುವ ಸ್ವಚ್ಛತಾ ಮಂತ್ರಗಳೊಂದಿಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

“ಅರಮನೆ ಆಶ್ರಯ ತಪ್ಪಿದಾಗ ಗುರುಮನೆ ಆಶ್ರಯ ಬೇಕು” ಅದರಂತೆ ಸ್ವಚ್ಛ ಮೈಸೂರು ಆಂದೋಲನದಲ್ಲಿ ಆಶ್ರಮವೂ ಕೈ ಜೋಡಿಸಿರುವುದು ಶ್ಲಾಘನೀಯ. ಸ್ಚಚ್ಛನಗರವಾಗಿ ಮೈಸೂರು ಮೂರನೆ ಬಾರಿ ಆಯ್ಕೆಯಾಗಿ ಹ್ಯಾಟ್ರಿಕ್ ಗಳಿಸುವ ಆತ್ಮವಿಶ್ವಾಸವಿದೆ ಎಂದು ಫೆಡರೇಷನ್ ಆಫ್ ಎಂ.ಸಿ.ಸಿ.ವಾರ್ಡ್ಸ್ ಪಾರ್ಲಿಮೆಂಟ್‍ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಮಾದೇಗೌಡ ಆಶಿಸಿದರು.

ಮುಂದುವರೆದು, ಸಾವಿರಾರು ಜನ ಸ್ವಯಂ ಸೇವಕರು ಸ್ವ-ಪ್ರೇರಣೆಯಿಂದ ಸ್ವಚ್ಛತೆ ಆಂದೋಲನದಲ್ಲಿ ಕೈಜೋಡಿಸಲು ಉತ್ಸುಕರಾಗಿದ್ದಾರೆ. ತ್ಯಾಜ್ಯ ವಸ್ತು ನಿರ್ವಹಣೆಗೆ ಆಶ್ರಮವೂ ಕೈ ಜೋಡಿಸಿರುವುದರಿಂದ ಉತ್ಸಾಹ ಹಿಮ್ಮಡಿಯಾಗಿದೆ. ಮೈಸೂರು ಭಾರತದ ಮಾದರಿ ನಗರವಾಗಿ ವಿಶ್ವದ ಗಮನ ಸೆಳೆಯಲಿ ಎಂದರು.

ಫೆಡರೇಷನ್ ಆಫ್ ಎಂ.ಸಿ.ಸಿ.ವಾರ್ಡ್ಸ್ ಪಾರ್ಲಿಮೆಂಟ್‍ ಉಪಾಧ್ಯಕ್ಷ ಡಾ.ಕೆ.ಎಸ್.ನಾಗಪತಿ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: