ಕರ್ನಾಟಕಪ್ರಮುಖ ಸುದ್ದಿ

ಅಕ್ಕಿ ಬೆಲೆಯಲ್ಲಿ ಏರಿಕೆ..!

ಈ ಬಾರಿ ಮಳೆಯಿಲ್ಲದೆ ಬೆಳೆಯೂ ಇಲ್ಲ. ಇತ್ತ ನೀರು ಇಲ್ಲದ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಮತ್ತೊಂದು ಆಘಾತಕಾರಿ ಸುದ್ದಿ ಲಭಿಸಿದೆ.

ಜಲಕ್ಷಾಮದ ಬಿಸಿಯಲ್ಲಿರುವಾಗಲೇ ತಿನ್ನುವ ಅನ್ನಕ್ಕೂ ಕುತ್ತು ಬರುವ ಲಕ್ಷಣಗಳು ಕಾಣಿಸುತ್ತಿದೆ. ಮಳೆಯಿಲ್ಲದ ಕಾರಣ ಅಕ್ಕಿಯ ಬೆಲೆ ಗಗನದತ್ತ ಮುಖ ಮಾಡುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಇನ್ಮುಂದೆ ಹಿಡಿ ಅಕ್ಕಿಗೆ ಜೇಬು ತುಂಬಾ ದುಡ್ಡು ನೀಡಬೇಕಾದ ಪರಿಸ್ಥಿತಿ ಬರಬಹುದೇನೋ ಎನ್ನುವ ಆತಂಕ ಮನೆ ಮಾಡಿದೆ. ಕೆಜಿ ಅಕ್ಕಿಗೆ ಐದರಿಂದ ಆರು ರೂಪಾಯಿ ಏರಿಕೆಯಾಗಿದೆ. ಇನ್ನು ರಾಜಮುಡಿ ಅಕ್ಕಿಗಂತೂ ಕೆಜಿಗೆ ಬರೋಬ್ಬರಿ ಮೂವತ್ತು ರೂಪಾಯಿ ಏರಿಕೆಯಾಗಿದೆ. ಸೋನಾ ಮಸೂರಿ ಅಕ್ಕಿ ಕೆಜಿಗೆ 50 ರೂಪಾಯಿ ಇದ್ದಿದ್ದು, 56 ರೂಗೆ ಏರಿಕೆಯಾಗಿದೆ. ಕೋಲಂ ಬುಲೆಟ್ ರೈಸ್ 57 ರೂಪಾಯಿ ಇದ್ದಿದ್ದು,  66 ರೂಗೆ ಏರಿಕೆಯಾಗಿದೆ. ಸ್ಟೀಮ್ ಕೋಲಂ 45 ರೂ ಇದ್ದಿದ್ದು, 52 ರೂ. ಗೆ ಏರಿಕೆ ಕಂಡಿದೆ. ಸ್ಟೀಮ್ ರೈಸ್ 34 ರೂಪಾಯಿ ಇದ್ದಿದ್ದು, 40 ರೂ.ಗೆ ಏರಿಕೆ ಕಂಡಿದೆ. ಹಾಸನದಲ್ಲಷ್ಟೇ ಬೆಳೆಯುವ ರಾಜಮುಡಿ ಅಕ್ಕಿಗೆ ಕೆಜಿಗೆ ಮೂವತ್ತು ರೂಪಾಯಿ ಏರಿಕೆ ಕಂಡಿದೆ. ರಾಜಮುಡಿ ಅಕ್ಕಿ ಬೆಲೆ 45 ರೂಪಾಯಿಯಿಂದ 70 ರೂಗೆ ಏರಿಕೆಯಾಗಿದೆ. ಇನ್ನು ಗೋಧಿ ಬೆಲೆ ಕೂಡ ಏರಿಕೆಯಾಗಿದ್ದು 30 ರೂಪಾಯಿಯಿಂದ 37ಕ್ಕೆ ಏರಿಕೆಯಾಗಿದೆ . ಮಳೆಯಿಲ್ಲದ ಕಾರಣ ಬೆಳೆ ಕಡಿಮೆಯಾಗಿ ದರ ಏರಿಕೆಯಾಗಿದೆ ಎನ್ನಲಾಗುತ್ತಿದೆ. ಇಲ್ಲಿ ಅಕ್ಕಿಗೆ ಬರ ಇದ್ದರೂ ಹೊರ ರಾಜ್ಯಗಳಿಗೆ ಅಕ್ಕಿಯನ್ನು ರಫ್ತು ಮಾಡಲಾಗುತ್ತಿದ್ದು, ಅಕ್ಕಿಯ ಅಭಾವ ಸೃಷ್ಟಿಸಲಾಗುತ್ತಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಅಕ್ಕಿ ದರ ಕಡಿಮೆಯಾಗೋದಿರಲಿ, ಮಾರುಕಟ್ಟೆ ಲೆಕ್ಕಾಚಾರದ ಪ್ರಕಾರ ಕೆಜಿ ಅಕ್ಕಿಗೆ ನೂರು ರೂಪಾಯಿಯಾದರೂ ಆಶ್ಚರ್ಯವಿಲ್ಲ. ಇದೀಗ ಬೇಸಿಗೆ ಆರಂಭವಾಗುತ್ತಿದ್ದು, ಬಿಸಿಲಿನ ಬೇಗೆಯ ಜೊತೆ ಬೆಲೆಯೇರಿಕೆಯ ಬಿಸಿಯೂ ಜನಸಾಮಾನ್ಯರನ್ನು ಹೈರಾಣಾಗಿಸಲಿದೆ.

Leave a Reply

comments

Related Articles

error: