ಮೈಸೂರು

ದಲಿತ ಮಹಿಳೆ ಶಿವಮ್ಮನ ಮೇಲೆ ಹಲ್ಲೆ : ಹಗರಣದಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಶಂಕೆ

ದಾಸನಕೊಪ್ಪಲು ಜಯರಾಮ ಮತ್ತು ಶಾಂತಕುಮಾರ್ ಎಂಬುವವರು ದಲಿತ ಮಹಿಳೆ ಶಿವಮ್ಮ ಅವರ ಮೇಲೆ ನಿವೇಶನದ ಅಕ್ರಮ ನೆಪವೊಡ್ಡಿ ದೌರ್ಜನ್ಯವೆಸಗಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ದೇವಗಳ್ಳಿ ಸೋಮಶೇಖರ್ ಅವರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರೂ ಪೊಲೀಸರು ಕ್ರಮ ಜರುಗಿಸದೆ ಮಹಿಳೆಗೆ ಅನ್ಯಾಯ ಮಾಡುತ್ತಿದ್ದಾರೆ. ಹಗರಣದಲ್ಲಿ ತಹಸೀಲ್ದಾರ್, ಸರ್ವೇಯರ್ ಹಾಗೂ ಮುಡಾ ಅಧಿಕಾರಿಗಳು ಭಾಗಿಯಾಗಿರುವ ಶಂಕೆಯಿದೆ. ಆದರೆ ಪೊಲೀಸರು ಪ್ರಕರಣವನ್ನು ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಿ ಎಂದು ನುಣುಚಿಕೊಳ್ಳುತ್ತಿದ್ದಾರೆ. ಅಪರಾಧಿಗಳ ವಿರುದ್ಧ ಕ್ರಮ ಜರುಗಿಸಿ ಮಹಿಳೆಗೆ ಮುಂದಿನ 24 ಗಂಟೆಯೊಳಗೆ ನ್ಯಾಯ ದೊರಕಿಸದೆ ಹೋದರೆ ಮುಂದಿನ ದಿನಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಗ್ರ ಚಳುವಳಿ ನಡೆಸಲಾಗುವುದು ಜೊತೆಗೆ ನಿವೇಶನಕ್ಕೆ ಸಂಬಂಧಿಸಿ ದಾಖಲೆ ಬಿಡುಗಡೆಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರಕರಣದ ಮೂಲ: ಬೋಗಾದಿ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್ 83:2ಎ1 ಜಾಗದಲ್ಲಿ ಶಿವಮ್ಮ ಹಾಗೂ ಆಕೆಯ ಕುಟುಂಬ 20 ವರ್ಷಗಳಿಂದಲೂ ವಾಸವಿದ್ದು, 20 ಗುಂಟೆ ಭೂಮಿಯನ್ನು ಕೊಡುಗೆಯಾಗಿ ವಿ.ಎಲ್. ಕುಲೋಸೋ ಅವರು ನೀಡಿದ್ದಾರೆ. ಭೂಮಿಗಾಗಿ ಜಯರಾಮ ಮತ್ತು ಶಾಂತಕುಮಾರ್ ಅವರು ಮುಡಾಗೆ ಸೇರಿದ ಜಾಗದಲ್ಲಿ  ಅಕ್ರಮ ಅಂಗಡಿ ಮಳಿಗೆಗಳನ್ನು ನಿರ್ಮಿಸುತ್ತಿದ್ದು ಅಧಿಕಾರಿಗಳು ಸೊಲ್ಲೆತ್ತಿಲ್ಲ. ಶಿವಮ್ಮನ ನಿವೇಶನದಲ್ಲಿಯೇ ಅಡ್ಡ ಕಾಂಪೌಂಡ್‍ ನಿರ್ಮಿಸಿ ಓಡಾಡಲು ತೊಂದರೆ ನೀಡಿ ಕಳೆದ 10ರಂದು ಕುಟುಂಬದವರ ಮೇಲೆ ದೌರ್ಜನ್ಯವೆಸಗಿ ವಿನಃ ಕಾರಣ ಕಿರುಕುಳ ನೀಡುತ್ತಿದ್ದಾರೆ.

ಪೊಲೀಸರು ಅರೋಪಿಗಳನ್ನು ಬಂಧಿಸಿದ್ದೇ ಅಲ್ಲದೇ ಆನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಗೆ ದಾಖಲಾಗುವಂತೆ ಖುದ್ದಾಗಿ ಸಲಹೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

Leave a Reply

comments

Related Articles

error: