ಮೈಸೂರು

ಪಠ್ಯಪುಸ್ತಕ ಪರಿಷ್ಕರಣೆ ಮೂಲಕ ಮಕ್ಕಳ ಭವಿಷ್ಯ ಕಡೆಗಣನೆ : ರಾಜ್ಯ ಸರ್ಕಾರದ ವಿರುದ್ಧ ಸಂಸದೆ ಶೋಭಾ ಆಕ್ರೋಶ

ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ಮಾತೃಭೂಮಿ, ಮಹಾಪುರುಷರು, ಭರತ, ಭಾರತ ಭೌಗೋಳಿಕ ಮುಂತಾದ ಪದಗಳನ್ನು ಕೈ ಬಿಟ್ಟು ನಕ್ಸಲ್‍ ನಾಯಕರನ್ನು ಸಮಾಜದ ಉಗ್ರರ ಹೆಸರನ್ನು ಸೇರಿಸಲಾಗುತ್ತಿದೆ. ಮುಗ್ಧ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಸರ್ಕಾರದ ಕ್ರಮದ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.

ಶುಕ್ರವಾರ, ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ವರ್ಷದಿಂದ ಕೇಂದ್ರ ಸರ್ಕಾರವು ರಾಷ್ಟ್ರೀಯ ಏಕ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಎನ್‍ಸಿಆರ್‍ಟಿಗೆ ಆಭಿಪ್ರಾಯವನ್ನು ತಿಳಿಸಿದೆ, ಕೇವಲ ಒಂದು ವರ್ಷದ ಅವಧಿಗಾಗಿ ರಾಜ್ಯ ಸರ್ಕಾರ ಪಠ್ಯಪುಸ್ತಕವನ್ನು ಪರಿಷ್ಕರಿಸಿ ಬದಲಾಯಿಸಿ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣವನ್ನು ನಷ್ಟ ಮಾಡುತ್ತಿದೆ. ನೀಟ್‍ ಪರೀಕ್ಷೆಗಾಗಿ ಮಕ್ಕಳನ್ನು ಅಣಿಗೊಳಿಸಬೇಕು. ಅಲ್ಲದೇ ಹಂತ-ಹಂತವಾಗಿ ಸಿಬಿಎಸ್‍ಸಿ ಪಠ್ಯಕ್ರಮವೂ ಜಾರಿಯಾಗುತ್ತಿದ್ದು, ಈ ಹಂತದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಅನವಶ್ಯಕ ಎಂದರು.

ಶಿಕ್ಷಕರಿಗೂ ಸೂಕ್ತ ತರಬೇತಿ ನೀಡಿಲ್ಲವೆಂದು ದೂರಿದ ಅವರು, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಗೂ, ತಜ್ಞರ ಸಮಿತಿಗೂ, ವಿರೋಧ ಪಕ್ಷಗಳ ಗಮನಕ್ಕೂ ತರದೇ ಬದಲಾವಣೆಗೆ ಏಕಪಕ್ಷೀಯವಾಗಿ ನಿರ್ಧರಿಸಿರುವುದು ಪಠ್ಯಪುಸ್ತಕಗಳ ಬದಲಾವಣೆಯ ಸರ್ವಾಧ್ಯಕ್ಷ ಬರಗೂರು ರಾಮಚಂದ್ರಪ್ಪನವರ ಶಿಫಾರಸ್ಸಿನಂತೆ ಅವರನ್ನು ಸಂತೃಪ್ತಿ ಪಡಿಸಲು ತರಾತುರಿಯಲ್ಲಿ ತಯಾರಿಸಿ ಮುದ್ರಣಕ್ಕೆ ನಡೆಸಿರುವುದು ಖಂಡನೀಯ. ಮಕ್ಕಳ ಭವಿಷ್ಯ ರೂಪಿಸಬೇಕಾದ ಪ್ರಾಥಮಿಕ ಶಿಕ್ಷಣ ಇಲಾಖೆ ಸಚಿವ ತನ್ವೀರ್ ಸೇಠ್ ಅವರು ನಿರ್ಲಕ್ಷ್ಯ ಹಾಗೂ ಹೊಣಗೇಡಿತನವನ್ನು ಪ್ರದರ್ಶಿಸುತ್ತಿದ್ದಾರೆ. ಇದರಿಂದ ಸರ್ಕಾರದ ಕ್ರಮದಿಂದಾಗಿ 1 ಕೋಟಿಗೂ ಅಧಿಕ ಮಕ್ಕಳಿಗೆ ಗೊಂದಲವುಂಟಾಗಿದೆ ಎಂದರು.

ಕರ್ನಾಟಕ ಸಂಶೋಧನೆ ತ್ರಿಸದಸ್ಯ ಪೀಠದ ಗಮನಕ್ಕೂ ತಾರದೆ, ಕರಡು ಪ್ರತಿಯನ್ನು ಬರವಣಿಗೆಯಲ್ಲಿ ನೀಡದೆ ಸಿ.ಡಿ.ಯಲ್ಲಿ ನೀಡಿರುವುದು ತಜ್ಞರು ಪರಿಷ್ಕರಿಸಲು ಸಾಧ್ಯವಾಗದಂತಹ ಸ್ಥಿತಿಯೂ ನಿರ್ಮಾಣವಾಗಿದೆ. ಕೆಳ ತರಗತಿಯಿಂದ ಮಾರ್ಪಡು ತರುವ ಬದಲು ಸರ್ಕಾರವು ಮೇಲಿನಿಂದ ಕೆಳಹಂತಕ್ಕೆ ಇಳಿಯುತ್ತಿರುವುದರಿಂದ ಶಿಕ್ಷಕರು ಹಾಗೂ ಹಾಗೂ ಪೋಷಕರಿಗೆ ಗೊಂದಲವುಂಟಾಗುತ್ತಿದೆ. ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸಚಿವರ ನಿಲುವೇನು? ಅವರ ಇಲಾಖೆ ಅವರ ಹಿಡಿತದಲ್ಲಿ ಇಲ್ಲವೇ? ಎಂದು ಸಚಿವರ ವಿರುದ್ಧ ಹರಿಹಾಯ್ದರು. ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆಯನ್ನು ತಕ್ಷಣವೇ ಕೈಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಚುಳವಳಿ ನಡೆಸಲಾಗುವುದು ಎಂದು ಎಚ್ಚರ ನೀಡಿದರು.

ಖಾಸಗಿ ಆಸ್ಪತ್ರೆಗಳ ಬಾಕಿ ಪಾವತಿಸಿ ಬಡರೋಗಿಗಳಿಗೆ ನೆರವಾಗುವಂತೆ ಒತ್ತಾಯ :

ರಮೇಶ್ ಕುಮಾರ್ ಅವರು ಆರೋಗ್ಯ ಸಚಿವರಾದಾಗ ಇಲಾಖೆ ಸುಧಾರಿಸುವುದು ಎನ್ನವ ಆಶಾಭಾವನೆ ಮೂಡಿತ್ತು. ಅದರೆ ಈಗ ನಿರಾಸೆಯಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರುಗಳಿಲ್ಲ. ಸೂಕ್ತ ಯಂತ್ರೋಪಕರಣಗಳಿಲ್ಲ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಚಿಕಿತ್ಸೆಗಳಿಲ್ಲದೇ ಅವರನ್ನು ಸರ್ಕಾರವೇ ಸಾವಿನ ದವಡೆಗೆ ದೂಡುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಆರೋಪಿದರು.

ಖಾಸಗಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆಂದೇ ಚಿಕಿತ್ಸೆಗಾಗಿ ಸುವರ್ಣ ಆರೋಗ್ಯ ಟ್ರಸ್ಟ್ ಅಡಿಯಲ್ಲಿ ಬರುವ ವಾಜಪೇಯಿ ಆರೋಗ್ಯ ಶ್ರೀ, ರಾಜೀವ್ ಆರೋಗ್ಯಭಾಗ್ಯ, ಜ್ಯೋತಿ ಸಂಜೀವಿನಿ, ಹರೀಶ್ ಸಾಂತ್ವನ ಹಾಗೂ ಯಶಸ್ವಿನಿ ಯೋಜನೆಗಳಲ್ಲಿ ಮಾರಣಾಂತಿಕ ಕಾಯಿಲೆಗಳಿಗಾಗಿ ಸರ್ಕಾರದಿಂದ ಚಿಕಿತ್ಸಾ ವೆಚ್ಚ ಭರಿಸಲಾಗುತ್ತಿದೆ. ಆದರೆ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ 150 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡುತ್ತಿಲ್ಲ. ಯಾಕೆ ಹೀಗೆ? ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆಯೇ ಎಂದು ಪ್ರಶ್ನಿಸಿದರು.

ನೆರೆ ರಾಜ್ಯಗಳಲ್ಲಿ ಆರೋಗ್ಯ ಯೋಜನೆಗಳಿಗೆ 900 ಕೋಟಿ ರೂಪಾಯಿಗಳವರೆಗೂ ಮೀಸಲಿರಿಸಲಾಗಿದೆ. ಆದರೆ ರಾಜ್ಯದಲ್ಲಿ ಮಾತ್ರ ಕೇವಲ 125 ಕೋಟಿ ರೂಪಾಯಿ ಮೀಸಲಿಟ್ಟು ಅದನ್ನು ಸಮರ್ಪಕವಾಗಿ ಪೂರೈಸದೇ ನಿರ್ಲಕ್ಷ್ಯ ತೋರಲಾಗುತ್ತಿದೆ. ಬಡ ರೋಗಿಗಳು ಸೂಕ್ತ ಚಿಕಿತ್ಸೆ ಇಲ್ಲದೇ ಸಾಯುತ್ತಿದ್ದಾರೆ. ಆದ್ದರಿಂದ ಈ ಕೂಡಲೇ ಸರ್ಕಾರ ಖಾಸಗಿ ಆಸ್ಪತ್ರೆಗಳ ಬಾಕಿಯನ್ನು ನೀಡಬೇಕು. ಮಾತ್ರವಲ್ಲದೆ ರೋಗಿಗಳು ಬಯಸಿದ ಕಡೆ ಚಿಕಿತ್ಸೆ ಪಡೆಯಲು ನಿಯಮಾವಳಿ ರೂಪಿಸಬೇಕು. ಈಗ ಬಾಕಿ ಇರುವ ಹಣವನ್ನು ಮುಂದಿನ ಬಜೆಟ್‍ನಲ್ಲಿ ಹಣ ಮೀಸಲಿಡಲಾಗುವುದು ಎನ್ನುವ ಭರವಸೆ ನೀಡುವ ಮೂಲಕ ಖಾಸಗಿ ಆಸ್ಪತ್ರೆಗಳು ಬಡ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಮಾಡಬೇಕು ಎಂದು ಆಗ್ರಹಿಸಿದದರು.

ಬಿಜೆಪಿ ಘಟಕದ ನಗರಾಧ್ಯಕ್ಷ ಡಾ.ಮಂಜುನಾಥ್, ಗ್ರಾಮಾಂತರ ಅಧ್ಯಕ್ಷ ಕೋಟೆ ಶಿವಣ್ಣ, ಮಂಜುನಾಥ್, ನಗರ ಪ್ರಧಾನ ಕಾರ್ಯದರ್ಶಿ ರಾಜೀವ್, ಬಸವೇಗೌಡ ಹಾಗೂ ಫಣೀಶ್ ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: