ಪ್ರಮುಖ ಸುದ್ದಿ

ಆದಾಯ ಖಾತ್ರಿ ಯೋಜನೆ ಹೆಚ್ಚು ಪರಿಣಾಮಕಾರಿ : ಕೊಡಗು ಕಾಂಗ್ರೆಸ್ ಬಣ್ಣನೆ

ರಾಜ್ಯ(ಮಡಿಕೇರಿ) ಮಾ.27 :- ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ರಾಷ್ಟ್ರದ ಬಡತನ ನಿರ್ಮೂಲನೆಯೊಂದಿಗೆ ಬಡವರು ಮತ್ತು ಶ್ರೀಮಂತರ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ‘ಕನಿಷ್ಠ ಆದಾಯ ಖಾತ್ರಿ’ ಯೋಜನೆಯನ್ನು ಜಾರಿಗೆ ತರುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಘೋಷಿಸಿದ್ದಾರೆ. ಈ ಯೋಜನೆಯಡಿ ರಾಷ್ಟ್ರದ ಜನಸಂಖ್ಯೆಯ ಶೇ.20 ರಷ್ಟು ಕಡು ಬಡಕುಟುಂಬದ ಫಲಾನುಭವಿಗಳ ಖಾತೆಗೆ ಮಾಸಿಕ 6 ಸಾವಿರ ರೂ. ಗಳಂತೆ ವಾರ್ಷಿಕ 72 ಸಾವಿರ ರೂ.ಗಳನ್ನು ಜಮೆ ಮಾಡಲಾಗುತ್ತದೆ. ಇದು ಅತ್ಯಂತ ಪರಿಣಾಮಕಾರಿ ಯೋಜನೆಯಾಗಿದೆ  ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಬಣ್ಣಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆದಾಯ ಖಾತ್ರಿ ಯೋಜನೆಯಿಂದ ದೇಶದ 5 ಕೋಟಿ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು.

ಕಾಂಗ್ರೆಸ್ ಪಕ್ಷ ಬಡವರ ಪರವಾದ, ನುಡಿದಂತೆ ನಡೆದ ಪಕ್ಷವಾಗಿದೆ. ಆದರೆ, ಈಗಿನ ಕೇಂದ್ರ ಸರ್ಕಾರ ಕಳೆದ 5 ವರ್ಷಗಳ ಆಡಳಿತಾವಧಿಯಲ್ಲಿ ತಾವು ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸದೆ, ರೈತ ವಿರೋಧಿಯಾಗಿ ನಡೆದುಕೊಂಡಿದೆ ಎಂದು ಟೀಕಿಸಿದರು. ಯುಪಿಎ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಆಹಾರ ಭದ್ರತಾ ಕಾಯ್ದೆಯನ್ನು ಬಿಜೆಪಿ ವಿರೋಧಿಸಿತ್ತು. ಈ ಯೋಜನೆ ಜಾರಿಯಾಗಿದ್ದರೆ ದೇಶದ ಪ್ರತಿಯೊಬ್ಬ ಪ್ರಜೆಗೆ ಕೇವಲ ರೂ.3 ಕ್ಕೆ ಒಂದು ಕೆಜಿ ಅಕ್ಕಿ ದೊರೆಯುತ್ತಿತ್ತು. ಬಿಜೆಪಿ ಮಂದಿ ಭೂ ಸ್ವಾಧೀನ ಕಾಯ್ದೆಯನ್ನು ವಿರೋಧಿಸಿದರಲ್ಲದೆ ಕಾಯ್ದೆಯನ್ನೆ ದುರ್ಬಲಗೊಳಿಸುವ ಪ್ರಯತ್ನ ಮಾಡಿದರು.

ರೈತರ ಕೃಷಿ ಸಾಲಮನ್ನಾ, ಬೆಳೆಗೆ ಶೇ.50 ಕನಿಷ್ಠ ಬೆಂಬಲ ಬೆಲೆ ಘೋಷಣೆ, ಅರಣ್ಯ ಕಾಯ್ದೆ ಜಾರಿಯನ್ನು ವಿರೋಧಿಸಿದ್ದ ಬಿಜೆಪಿ, ಇದೀಗ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಯ್ದೆಗಳನ್ನು ದುರ್ಬಲಗೊಳಿಸಲು ಮುಂದಾಗಿದೆ. ನೋಟು ಅಮಾನೀಕರಣ ಮತ್ತು ಅವೈಜ್ಞಾನಿಕ ಜಿಎಸ್‍ಟಿ ಪದ್ಧತಿಯನ್ನು ಜಾರಿಗೆ ತಂದು ಜನಸಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸುವ ಕಾರ್ಯವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದೆ ಎಂದು ಆರೋಪಿಸಿದ ಮಂಜುನಾಥ್ ಕುಮಾರ್ ಬಡವರು ಹಾಗೂ ಜನಸಾಮಾನ್ಯರ ಪರವಾದ ಯೋಜನೆಗಳನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಜಾತ್ಯತೀತ ಜನತಾದಳ ಪಕ್ಷದೊಳಗಿರಬಹುದಾದ ಗೊಂದಲಗಳಿಗೆ ನಾವು ಮೂಗು ತೂರಿಸುವುದಿಲ್ಲವೆಂದು ಸ್ಪಷ್ಟಪಡಿಸಿರುವ ಅವರು, ಮೈತ್ರಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಜೆಡಿಎಸ್‍ನ ಎಲ್ಲಾ ಮುಖಂಡರು ಸಹಕಾರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಚುನಾವಣೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದ್ದು, ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲು ಶತಪ್ರಯತ್ನ ನಡೆಸಲಾಗುತ್ತದೆ. ಯಶಸ್ಸಿಗಾಗಿ ಬ್ಲಾಕ್ ಮಟ್ಟದಿಂದಲೇ ಪಕ್ಷ ಸಂಘಟನೆಯನ್ನು ಚುರುಕುಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಕಾಂಗ್ರೆಸ್ ವಿರುದ್ಧ ಜಿಲ್ಲಾ ಬಿಜೆಪಿ ವಕ್ತಾರರು ಮಾಡಿರುವ ಆರೋಪಗಳನ್ನು ಕೇವಲ ‘ಚಪಲ’ವೆಂದು ವ್ಯಂಗ್ಯವಾಡಿದ ಕೆ.ಕೆ.ಮಂಜುನಾಥ್ ಕುಮಾರ್, ಬಿಜೆಪಿ ಮಂದಿ ಮಾಡಿರುವ ಆರೋಪಗಳಲ್ಲಿ ಒಂದೇ ಒಂದು ಅಂಕಿ ಅಂಶಗಳೂ ಇಲ್ಲ. ಪ್ರತಿಕ್ರಿಯಿಸುವಷ್ಟು ಗಂಭೀರ ಆರೋಪಗಳೇ ಅವುಗಳಲ್ಲವೆಂದರು. ಅಂಕಿ ಅಂಶಗಳೊಂದಿಗೆ ಕಾಂಗ್ರೆಸ್‍ನ್ನು ಟೀಕಿಸಿದಲ್ಲಿ ಅದಕ್ಕೆ ಪ್ರತಿಕ್ರಿಯಿಸಲು ಸಿದ್ಧ ಇರುವುದಾಗಿ ಸ್ಪಷ್ಟಪಡಿಸಿದರು.

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮೈತ್ರಿ ಅಭ್ಯರ್ಥಿಯ ಪರವಾಗಿ ಪ್ರಚಾರಕ್ಕಾಗಿ  ಮಾಜಿ ಸಿಎಂ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಾ. ಜಿ. ಪರಮೇಶ್ವರ್, ಪ್ರಮುಖರಾದ ಈಶ್ವರ ಖಂಡ್ರೆ, ಹೆಚ್.ಕೆ. ಪಾಟೀಲ್, ಜಮೀರ್ ಅಹಮ್ಮದ್ ಮೊದಲಾದವರನ್ನು ಕೊಡಗಿಗೆ ಕಳುಹಿಸಿಕೊಡುವಂತೆ ಕೆಪಿಸಿಸಿಗೆ ಮನವಿ ಮಾಡಲಾಗಿದ್ದು, ಹೆಚ್ಚಿನ ನಾಯಕರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಮುಖ ಟಿ.ಪಿ.ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಫ್ಯಾನ್ಸಿ ಪಾರ್ವತಿ ಹಾಗೂ ಪ್ರಮುಖರಾದ ಎಂ.ಎ.ಉಸ್ಮಾನ್ ಉಪಸ್ಥಿತರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: