ಮೈಸೂರು

ಮಾರ್ಚ್ 31 ರೊಳಗೆ ಬಾಕಿ ಹಣ ಪಾವತಿಸದಿದ್ದರೆ ಸಿಎ ನಿವೇಶನ ರದ್ದು : ಮುಡಾ ನೋಟಿಸ್

ಸಿಎ ನಿವೇಶನಗಳ ಬಾಕಿ ಹಣವನ್ನು ಮಾರ್ಚ್ 31 ರೊಳಗಾಗಿ ಪಾವತಿಸುವಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸಂಘ-ಸಂಸ್ಥೆಗಳಿಗೆ ತಿಳಿಸಿದೆ.

ಈ ಕುರಿತು ಸಾರ್ವಜನಿಕ ಪ್ರಕಟಣೆ ನೀಡಿರುವ ಮುಡಾ ಕಮೀಷನರ್ ಡಾ.ಎಂ.ಮಹೇಶ ಅವರು, ಮೈಸೂರು ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿ ಮತ್ತು ಮುಡಾದಿಂದ ಹಂಚಿಕೆ ಮಾಡಿರುವ ನಾಗರಿಕ ಸೌಕರ್ಯ ನಿವೇಶನಗಳ ವಾರ್ಷಿಕ ಗುತ್ತಿಗೆ ಕಂತಿನ ಹಣ ಹಾಗೂ ಬಡ್ಡಿ ಸೇರಿ ಬಾಕಿ ಉಳಿಸಿಕೊಂಡಿರುವವರು ಮಾರ್ಚ್ 31 ರೊಳಗಾಗಿ ಪಾವತಿಸಬೇಕೆಂದು ಸೂಚನೆ ನೀಡಿದ್ದಾರೆ. ನೀಡಿರುವ ಕಾಲಾವಕಾಶದೊಳಗಾಗಿ ಕಂತಿನ ಮೊಬಲಗನ್ನು ಪಾವತಿಸಲು ತಪ್ಪಿದಲ್ಲಿ ಯಾವುದೇ ನೋಟಿಸ್ ನೀಡದೆ ಸಿಎ ನಿವೇಶನಗಳನ್ನು ರದ್ದು ಮಾಡಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸೂಚನೆ ನಿಯಾಮವಳಿಗಳಿಗೆ ಅನುಗುಣವಾಗಿ ನಿಗದಿತ ಅವಧಿಯಲ್ಲಿ ಕಟ್ಟಡ ನಿರ್ಮಿಸಿ ಮಂಜೂರಾತಿ ಉದ್ದೇಶಕ್ಕಾಗಿಯೇ ಉಪಯೋಗಿಸುತ್ತಿರುವ ಸಿಎ ನಿವೇಶನಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಿಎ ನಿವೇಶನ ಹಂಚಿಕೆ ನಿಯಮ ಉಲ್ಲಂಘನೆಯಾಗಿರುವ ಹಾಗೂ ನಿಗದಿತ ಅವಧಿಯೊಳಗೆ ಕಟ್ಟಡ ನಿರ್ಮಿಸದೆ ಖಾಲಿ ನಿವೇಶನ ಉಳಿಸಿಕೊಂಡಿರುವ ಸಂಘ-ಸಂಸ್ಥೆಗಳಿಗೂ ಪ್ರತ್ಯೇಕ ನೋಟಿಸ್ ಗಳು ಸಿದ್ಧವಾಗುತ್ತಿದ್ದು, ಶೀಘ್ರ ಜಾರಿ ಮಾಡಲಾಗುವುದು ಎಂದು ಮುಡಾ ಕಾರ್ಯದರ್ಶಿ ಎಂ.ಕೆ.ಸವಿತಾ ತಿಳಿಸಿದ್ದಾರೆ.

ನಿಯಮ ಉಲ್ಲಂಘನೆಯಾಗಿರುವವರ ಪಟ್ಟಿ ಮಾಡುತ್ತಿದ್ದು, ಯಾವ ವರ್ಷ ಸಿಎ ನಿವೇಶನ ಹಂಚಿಕೆ ಮಾಡಲಾಗಿದೆ. ನಿಯಮದಡಿ ಯಾವ ಅವಧಿಯೊಳಗೆ ಕಟ್ಟಡ ನಿರ್ಮಿಸಬೇಕಾಗಿತ್ತು. ಪ್ರಸ್ತುತ ಸ್ಥಿತಿ ಏನು ಎಂಬುದರ ಸಮೀಕ್ಷೆ ಮಾಡುತ್ತಿದ್ದು, ಅಂತಹವರಿಗೆ ನೋಟಿಸ್ ಜಾರಿ ಮಾಡಿ ಸಮಜಾಯಿಷಿ ಕೇಳಿ ಪಡೆದ ನಂತರ ಈ ಪ್ರಕರಣಗಳನ್ನು ಹೇಗೆ ಪರಿಗಣಿಸಬೇಕು ಎಂಬುದರ ಬಗ್ಗೆ ಪ್ರಾಧಿಕಾರದ ಸಭೆ ಗಮನಕ್ಕೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.

Leave a Reply

comments

Related Articles

error: