ಪ್ರಮುಖ ಸುದ್ದಿ

ಮೈತ್ರಿ ಅಭ್ಯರ್ಥಿ ವಿಜಯಶಂಕರ್‍ ರಿಂದ ಕೊಡಗಿಗೆ ಸಪ್ತಸೂತ್ರಗಳ ಭರವಸೆ 

ರಾಜ್ಯ(ಮಡಿಕೇರಿ) ಮಾ.29 :- ಕೊಡಗು-ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ವತಿಯಿಂದ ಚುನಾವಣಾ ಪ್ರಣಾಳಿಕೆ ಪ್ರಕಟಿಸಲಾಗಿದೆ. ಆದರೆ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ತನ್ನದೇ ಆದ ಸಪ್ತಸೂತ್ರಗಳ ಪ್ರಣಾಳಿಕೆಯನ್ನು ಸಿದ್ಧಪಡಿಸಿರುವುದಾಗಿ ವಿಜಯಶಂಕರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗಿನ ಬೆಳೆಗಾರರ ಹಾಗೂ ರೈತರ ಹಿತಕಾಯಲು ತಾವು ಬದ್ಧ ಎಂದು ಭರವಸೆ ನೀಡಿದರು. ಕೃಷಿ ದೇಶದ ಆರ್ಥಿಕತೆಯ ಮೂಲವಾಗಿದ್ದು, ಈ ನಿಟ್ಟಿನಲ್ಲಿ ಕೊಡಗಿನ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಪ್ರಮುಖ ಒತ್ತು ನೀಡಲಾಗುವುದು, ಜೊತೆಗೆ ಕೃಷಿ ಆಧಾರಿತ ಕೈಗಾರಿಕೆಗಳನ್ನು ಕೊಡಗಿನಲ್ಲಿ ಸ್ಥಾಪಿಸುವುದರೊಂದಿಗೆ ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಲಾಗುವುದು, ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದು, ಆ ನಿಟ್ಟಿನಲ್ಲಿ ವಿಶೇಷ ಗಮನಹರಿಸಲಾಗುವುದು, ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವುದು,  ಅಂತರ್ಜಲ ಮಟ್ಟ ಹೆಚ್ಚಿಸಲು ಹಾಗೂ ಕಾವೇರಿ ಶುದ್ದೀಕರಣಕ್ಕೆ  ವಿಶೇಷ ಯೋಜನೆ ರೂಪಿಸುವುದು, ತೆಂಗು ಮತ್ತು ಅಡಿಕೆ, ಏಲಕ್ಕಿ, ಕಿತ್ತಳೆ ಸೇರಿದಂತೆ ತೋಟಗಾರಿಕಾ ಬೆಳೆಗಳ ಪುನಶ್ಛೇತನಕ್ಕೆ ಆದ್ಯತೆ ನೀಡಲಾಗುವುದು. ಕಸ್ತೂರಿರಂಗನ್ ವರದಿಯಲ್ಲಿ ಮಾರ್ಪಾಡುಗಳನ್ನು ಮಾಡುವಂತೆ ಕೇಂದ್ರವನ್ನು ಒತ್ತಾಯಿಸುವುದು, ಎನ್‍ಡಿಆರ್‍ಎಫ್ ಮಾರ್ಗಸೂಚಿಗಳನ್ನು ಬದಲಾಯಿಸಲು ಪ್ರಯತ್ನಿಸಲಾಗುವುದು. ಎಂದು ಅವರು ಈ ಸಂದರ್ಭ ವಿವರಿಸಿದರು.

ಈ ಎಲ್ಲಾ ಯೋಜನೆಗಳಿಗೆ ಸಂಬಂಧಿಸಿದಂತೆ ತಾನು ಗೆಲುವು ಸಾಧಿಸಿದ 90 ದಿನಗಳಲ್ಲಿ ಪ್ರಯತ್ನಿಸಲಾಗುವುದಲ್ಲದೆ, 91ನೇ ದಿನದಿಂದ ಅವುಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ವಿಜಯಶಂಕರ್ ಘೋಷಿಸಿದರು.

ಕೊಡಗು-ಮೈಸೂರು ಲೋಕಸಭಾ ಕ್ಷೇತ್ರ ವಿಶಾಲವಾದ ಕ್ಷೇತ್ರವಾಗಿದ್ದು, ಇಲ್ಲಿನ ಜನರಿಗೆ ಸಂಸದರು ಎಲ್ಲಿ ಸಿಗುತ್ತಾರೆ ಎಂಬ ಗೊಂದಲವಿದೆ. ತಾನು ಆಯ್ಕೆಯಾದಲ್ಲಿ ಸಂಸತ್ತಿನ ಅಧಿವೇಶನ ಹಾಗೂ ಇತರ ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಪ್ರತೀ ಶನಿವಾರ ಬೆಳಗಿನಿಂದ ಮಧ್ಯಾಹ್ನದವರೆಗೆ ಮಡಿಕೇರಿ ಹಾಗೂ ಅಪರಾಹ್ನ ವೀರಾಜಪೇಟೆ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಜಿಲ್ಲೆಯ ಜನತೆಯ ಅಹವಾಲು ಸ್ವೀಕರಿಸುವುದಾಗಿ ತಿಳಿಸಿದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: