ಪ್ರಮುಖ ಸುದ್ದಿ

ಚುನಾವಣಾ ಆಯೋಗದ ನಿರ್ದೇಶನ ಕಟ್ಟುನಿಟ್ಟಾಗಿ ಪಾಲಿಸಿ : ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚನೆ

ರಾಜ್ಯ(ಮಡಿಕೇರಿ) ಮಾ.29 :- ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನವು ಏಪ್ರಿಲ್, 18 ರಂದು ನಡೆಯಲಿದ್ದು, ಜಿಲ್ಲೆಯ 543 ಮತಗಟ್ಟೆಗಳಿಗೆ ನಿಯೋಜಿಸಿರುವ ವಿವಿಧ ಹಂತದ ಅಧಿಕಾರಿಗಳು ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚಿಸಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆ ಪಿಆರ್‍ಒ, ಎಪಿಆರ್‍ಒ, 2ನೇ, 3ನೇ ಮತ್ತು 4ನೇ ಮತಗಟ್ಟೆ ಅಧಿಕಾರಿಗಳಿಗೆ  ನಗರದ ಸಂತ ಜೋಸೆಫರ ಶಾಲೆ ಹಾಗೂ ವಿರಾಜಪೇಟೆಯ ಸಂತ ಅನ್ನಮ್ಮ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಚುನಾವಣೆಯಲ್ಲಿ ಮತಗಟ್ಟೆ ಅಧಿಕಾರಿಗಳ ಜವಾಬ್ದಾರಿ ಮಹತ್ತರವಾಗಿದ್ದು, ಮಸ್ಟರಿಂಗ್ ದಿನ ಮತ್ತು ಮತಗಟ್ಟೆಗಳಲ್ಲಿ ನಿರ್ವಹಿಸಬೇಕಾದ ಕರ್ತವ್ಯ ಮತ್ತು ಡಿಮಸ್ಟರಿಂಗ್ ಸಂದರ್ಭದಲ್ಲಿ ಅನುಸರಿಸಬೇಕಾದ ಕಾರ್ಯಗಳ ಬಗ್ಗೆ ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.  ವಿದ್ಯುನ್ಮಾನ ಮತಯಂತ್ರಗಳು, ಅಣುಕು ಮತದಾನ, ಅಂಚೆ ಮತಪತ್ರ, ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಮತ್ತಿತರ ಬಗ್ಗೆ ಹೆಚ್ಚಿನ ನಿಗಾವಹಿಸಬೇಕಿದೆ. ಆ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವಂತೆ ಅನೀಸ್ ಕಣ್ಮಣಿ ಜಾಯ್ ಅವರು ನಿರ್ದೇಶನ ನೀಡಿದರು.

ಮತಗಟ್ಟೆ ಅಧಿಕಾರಿಗಳು ಮತಗಟ್ಟೆ ಕೇಂದ್ರದ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ಳಬೇಕಿದೆ, ಎಲ್ಲಾ ಹಂತದ ಮತಗಟ್ಟೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಮತದಾರರು ಚುನಾವಣಾ ಆಯೋಗ ನೀಡಿರುವ ಮತದಾರರ ಭಾವಚಿತ್ರದ ಗುರುತಿನ ಚೀಟಿ ಅಥವಾ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನ ಮಾಡುವುದಕ್ಕೆ ಅವಕಾಶ ನೀಡಬೇಕಿದೆ ಎಂದು ಅವರು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಅವರು ಮಾತನಾಡಿ ಮಸ್ಟರಿಂಗ್ ದಿನದಂದು ಮತಗಟ್ಟೆಯ ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ನಿಗಧಿತ ಸಮಯಕ್ಕೆ ಹಾಜರಾಗಬೇಕು. ತಮ್ಮ ತಮ್ಮ ಮತಗಟ್ಟೆಗೆ ಸಂಬಂಧಿಸಿದ ಸಿಬ್ಬಂದಿಗಳನ್ನು ಸೇರಿಸಿಕೊಂಡು ಪರಸ್ಪರ ಪರಿಚಯ ಮಾಡಿಕೊಳ್ಳಬೇಕು, ಹಾಜರಾತಿ ಪುಸ್ತಕದಲ್ಲಿ ಕಡ್ಡಾಯವಾಗಿ ಸಹಿ ಮಾಡುವುದು. ಯಾವುದೇ ಮತಗಟ್ಟೆ ಅಧಿಕಾರಿ ಇತರೆ ಸಿಬ್ಬಂದಿ ಗೈರು ಆದಲ್ಲಿ ಸಹಾಯಕ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರರಿಗೆ ತಿಳಿಸುವುದು. ರಜೆ ಹೋದಲ್ಲಿ ಬದಲಿ ವ್ಯವಸ್ಥೆ ಮಾಡಿಕೊಳ್ಳುವುದು ಮಸ್ಟರಿಂಗ್ ಪಟ್ಟಿಯಿಂದ ದೃಢಪಡಿಸಿಕೊಳ್ಳಬೇಕು ಎಂದರು.

ಉಪ ವಿಭಾಗಾಧಿಕಾರಿ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಟಿ.ಜವರೇಗೌಡ ಅವರು ಮಾತನಾಡಿ ಮತಗಟ್ಟೆ ಅಧಿಕಾರಿಗಳು ಶಾಂತಿ ಮತ್ತು ನಿಷ್ಪಕ್ಷಪಾತವಾಗಿ ಚುನಾವಣಾ ಕರ್ತವ್ಯ ನಿರ್ವಹಿಸಬೇಕು. ಚುನಾವಣಾ ಅಧಿಕಾರಿಯಿಂದ ಮತದಾನಕ್ಕೆ ಸಂಬಂಧಿಸಿದ ಎಲ್ಲಾ ಸಾಮಾಗ್ರಿಗಳನ್ನು ಪಡೆದು ಚುನಾವಣೆ ಕರ್ತವ್ಯ ನಿರ್ವಹಿಸಬೇಕು. ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ದಿನ ಚುನಾವಣೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಬೇಕು ಎಂದರು.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಶ್ರೀನಿವಾಸ್ ಅವರು ರ್ಯಾಂಡಮೈಸ್ ತಂಡಕ್ಕೆ ಹಂಚಿಕೆ ಮಾಡಿರುವಂತೆ ಮತಗಟ್ಟೆ ಸಂಖ್ಯೆ ಗುರುತಿಸಿಕೊಳ್ಳುವುದು, ತಮ್ಮ ಕಾರ್ಯತಂಡ ಸದಸ್ಯರ ಒಗ್ಗೂಡಿಸುವುದು, ಸಾಮಾಗ್ರಿ ವಿತರಿಸುವ ಮಸ್ಟರಿಂಗ್ ಕೌಂಟರ್‍ಗೆ ತೆರಳುವುದು ತಂಡದ ಸದಸ್ಯರೊಂದಿಗೆ ಮಸ್ಟರಿಂಗ್ ವಿಭಾಗದಿಂದ ವಿವಿಧ ಸಾಮಾಗ್ರಿ ಪಡೆಯುವುದು. ಸಾಮಾಗ್ರಿ ಪಡೆದ ನಂತರ ಮತ್ತೊಮ್ಮೆ ಸಾಮಾಗ್ರಿ ಪರಿಶೀಲಿಸಿಕೊಳ್ಳುವುದು. ಮತಗಟ್ಟೆಗೆ ತಲುಪುವ ವಾಹನ ಗುರುತಿಸಿ ಸ್ಥಳ ಕಾಯ್ದಿರಿಸಿಕೊಳ್ಳುವಂತೆ ಅವರು ಹೇಳಿದರು.

ಮಾಸ್ಟರ್ ತರಬೇತಿದಾರರಾದ ವಾಲ್ಟರ್ ಡಿಮೆಲ್ಲೊ ಮತ್ತು ಷಂಶುದ್ದಿನ್ ಅವರು ವಿದ್ಯುನ್ಮಾನ ಮತಯಂತ್ರ, ಅಣಕು ಮತದಾನ, ಕಂಟ್ರೋಲ್ ಹಾಗೂ ಬ್ಯಾಲೆಟ್ ಯೂನಿಟ್, ವಿವಿಪ್ಯಾಟ್ ಅಳವಡಿಸುವುದು. ಮತಗಟ್ಟೆ ಕೇಂದ್ರದಲ್ಲಿ ಮತದಾನದಂದು ಪೂರ್ವ ಸಿದ್ಧ್ದತೆ ಮಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ತಹಶೀಲ್ದಾರಾದ ನಟೇಶ್, ಗೋವಿಂದರಾಜು ಇತರರು ಇದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: