ಮೈಸೂರು

ಪ್ರವಾಸಿಗರಿಗೆ ಮೃಗಾಲಯಕ್ಕೆ ಅವಕಾಶ ಕಲ್ಪಿಸಲು ಒತ್ತಾಯಿಸಿ ಪ್ರತಿಭಟನೆ

ಹಕ್ಕಿ ಜ್ವರದ ನೆಪವನ್ನಿಟ್ಟುಕೊಂಡು, ಏಕಪಕ್ಷೀಯವಾಗಿ ನಿರ್ಧಾರವನ್ನು ತೆಗೆದುಕೊಂಡು ಮೈಸೂರಿನ ಚಾಮರಾಜೇಂದ್ರ ಮೃಗಾಲಯವನ್ನು ಬಂದ್ ಮಾಡಿರುವ ಮೃಗಾಲಯದ ನಿರ್ದೇಶಕಿಯವರ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರು ಮೃಗಾಲಯದ ಎದುರು ಶನಿವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಪ್ರವಾಸಿಗರ ಪ್ರಮುಖ ತಾಣವಾದ ಮೃಗಾಲಯಕ್ಕೆ 124ವರ್ಷಗಳ ಇತಿಹಾಸವಿದ್ದು, ಎಂದೂ ಕೂಡ ಯಾವ ಪರಿಸ್ಥಿತಿಯಲ್ಲೂ ಒಂದು ತಿಂಗಳ ಕಾಲ ಬಂದ್ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಬಂದ್ ಮಾಡಲಾಗಿದೆ. ಮೃಗಾಲಯದ ನಿರ್ದೇಶಕಿ ಮತ್ತು ಮೃಗಾಲಯದ ನೌಕರರಲ್ಲಿ ಅಸಮಾಧಾನವಿದೆ. ಇವರ ಮತ್ತು ನೌಕರರ ನಡುವಿನ ಹೊಂದಾಣಿಕೆ ಸಮಸ್ಯೆಯಿಂದಲೇ ಮೃಗಾಲಯದಲ್ಲಿ ಪಕ್ಷಿಗಳ ಸಾವು ಸಂಭವಿಸಿದೆ. ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿದರು. ಮೃಗಾಲಯ ಬಂದ್ ಮಾಡಿರುವುದರಿಂದ ಪ್ರವಾಸೋದ್ಯಮಕ್ಕೆ ಹಾಗೂ ರಾಜ್ಯ ಬೊಕ್ಕಸಕ್ಕೆ ಕೋಟ್ಯಾಂತರ ರೂ.ನಷ್ಟವುಂಟಾಗಿದೆ. ಸರ್ಕಾರ ಕೂಡಲೇ ಮೃಗಾಲಯದಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಪ್ರವಾಸಿಗರಿಗೆ ಮೃಗಾಲಯಕ್ಕೆ ಪ್ರವೇಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ನಗರಾಧ್ಯಕ್ಷ ಪ್ರಜೇಶ್ ಪಿ, ಶಾಂತಮೂರ್ತಿ ಆರ್, ರವಿತೇಜ, ಮಿನಿಬಂಗಾರಪ್ಪ, ನಂದಕುಮಾರ್, ಶ್ರೀನಿವಾಸರಾಜಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

comments

Related Articles

error: