ಕರ್ನಾಟಕಪ್ರಮುಖ ಸುದ್ದಿ

ಜಿಲ್ಲಾ ಪಂಚಾಯಿತಿ ಆಡಳಿತ ಸುಧಾರಣೆಯತ್ತ ಹಾಸನ ಸಿ.ಇ.ಓ ಚಿತ್ತ

ಹಾಸನ (ಮಾ.30): ಚುನಾವಣೆ ಪ್ರಕ್ರಿಯೆ ಮತದಾರರ ಜಾಗೃತಿ ಚಟುವಟಿಕೆಗಳ ಉಸ್ತುವಾರಿಯ ನಡುವೆಯೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್. ವಿಜಯ ಪ್ರಕಾಶ್ ಅವರು ತಮ್ಮ ವ್ಯಾಪ್ತಿಯ ಆಡಳಿತ ವ್ಯವಸ್ಥೆ ಮತ್ತು ಸುಧಾರಣೆಗೆ ಆದ್ಯತೆ ನೀಡುತ್ತಿದ್ದಾರೆ.

ಜಿಲ್ಲೆಯಾದ್ಯಂತ ಸಂಚರಿಸಿ ಶಾಲಾ, ಕಾಲೇಜುಗಳು, ಅಂಗನವಾಡಿ, ಆಸ್ಪತ್ರೆ, ಹಾಸ್ಟೆಲ್‍ಗಳ ಸ್ಥಿತಿಗತಿ ಪರಿಶೀಲಿಸಿ ಸುಧಾರಣೆಗೆ ಶ್ರಮಿಸುತ್ತಿದ್ದಾರೆ.ಒಟ್ಟಾರೆ ಶಾಲೆ, ಅಂಗನವಾಡಿಗಳಲ್ಲಿ ಶೈಕ್ಷಣಿಕ ವಾತಾವರಣ ಉತ್ತಗೊಳ್ಳಬೇಕು. ಸಭ್ಯತೆಗೆ ಆದ್ಯತೆ ಸಿಗಬೇಕು. ಹೂದೋಟ ಸಸಿಗಳು ನಡೆವ ಪ್ರಕ್ರಿಯೆಗೆ ಪ್ರೇರಣೆ ನೀಡುವುದು-ಅಂಗನವಾಡಿಗಳಲ್ಲಿ ಮಕ್ಕಳಿಗೆ ಉತ್ತಮ ಷೌಷ್ಠಿಕ ಆಹಾರ ಹಾಗೂ ಶಾಲೆಗಳಲ್ಲಿ ಉತ್ತಮ ರೀತಿಯಲ್ಲಿ ಬಿಸಿಯೂಟ ದೊರೆಯುವಂತಾಗಬೇಕು ಎಂಬುದು ಸಿ.ಇ.ಓ ಅವರ ಸದಾಶಯ.

ಹಾಗಾಗಿ ನಿರಂತರವಾಗಿ ಬೇರೆ ಬೇರೆ ಅಂಗನವಾಡಿಗಳ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಪರಿಸರ, ಉಟೋಪಚಾರ, ಆರೈಕೆಗಳನ್ನು ಗಮನಿಸಿ ಅಗತ್ಯ ಗುಣಾತ್ಮಕ ಬದಲಾವಣೆಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಇದರಿಂದ ಅಧಿಕಾರಿ, ಸಿಬ್ಬಂದಿಗಳು ಜಾಗ್ರತರಾಗಿ ತಮ್ಮ ಹೊಣೆಗಾರಿಕೆಯನ್ನು ಇನ್ನಷ್ಟು ಉತ್ತಮವಾಗಿ ಹಾಗೂ ನ್ಯಾಯಸಮ್ಮತವಾಗಿ ನಿಭಾಯಿಸಬಲ್ಲರು ಎಂಬುದು ಡಾ. ಕೆ.ಎನ್. ವಿಜಯಪ್ರಕಾಶ್ ಅವರ ಚಿಂತನೆಯಾಗಿದೆ.
ದಿಢೀರ್ ಭೇಟಿ ನೀಡಿ ಪರಿಶೀಲಿಸುತ್ತಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಮೊದಲ ಹಂತದಲ್ಲಿ ಅಧಿಕಾರಿ,
ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿ ಲೋಪಗಳನ್ನು ತಿದ್ದಿಕೊಂಡು ಸರಿಪಡಿಸಿಕೊಳ್ಳಲು ಸೂಚನೆ ನೀಡಿತ್ತಿದ್ದಾರೆ.

ಹಾಸ್ಟೆಲ್‍ಗಳಲ್ಲಿ ಉಟೋಪಚಾರ ಮೂಲಭೂತ ಸೌಕರ್ಯ ಹಾಗೂ ಶೈಕ್ಷಣಿಕ ವಾತಾವರಣ ಇನ್ನಷ್ಟು ಸುಧಾರಣೆ ಮಾಡುವ ಮೂಲಕ ಬಡ ವಿದ್ಯಾರ್ಥಿಗಳು ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಬೇಕು. ಅದಕ್ಕೆ ಎಲ್ಲಾ ಇಲಾಖೆ ಅಧಿಕಾರಿ ಸಿಬ್ಬಂದಿ ಹೆಚ್ಚಿನ ಕ್ರಮವಹಿಸಬೇಕು ಎಂದು ಡಾ. ಕೆ.ಎನ್. ವಿಜಯಪ್ರಕಾಶ್ ಅವರು ಈಗಾಗಲೇ ನಿರ್ದೇಶನ ನೀಡಿದ್ದಾರೆ.

ಈ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳು ವಸತಿ ಶಾಲೆಗಳ ಪ್ರಾಂಶುಪಾಲರು, ವಾರ್ಡ್‍ನ್‍ಗಳು ಸಭೆ ನಡೆಸಿ ತಮ್ಮ ವ್ಯಾಪ್ತಿಯ ಎಲ್ಲಾ ಹಾಸ್ಟೆಲ್‍ಗಳು, ವಸತಿ ಶಾಲೆಗಳಲ್ಲಿ ಸುಧಾರಣೆಗೆ ಅಗತ್ಯ ಕ್ರಮವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಎನ್. ವಿಜಯಪ್ರಕಾಶ್ ಅವರು ಹಠಾತ್ ಭೇಟಿ ನೀಡುವ ಮೂಲಕ ಚಿಕಿತ್ಸಾ ಸೌಲಭ್ಯ ವೃದ್ದಿಗೆ ಸಲಹೆ, ನಿರ್ದೇಶನಗಳನ್ನು ನೀಡುತ್ತಿದ್ದಾರೆ.
ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿರುವ ಕಚೇರಿಗೂ ಟೇಬಲ್‍ವಾರು ಭೇಟಿ ನೀಡುತ್ತಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿಗಳಾದ ಡಾ.ಕೆ.ಎನ್ ವಿಜಯ್ ಪ್ರಕಾಶ್ ಅವರು ಕಾರ್ಯ ಪ್ರವೃತ್ತಿ ಸುಧಾರಣೆಗೆ ಸಲಹೆ ಸೂಚನೆಗಳನ್ನೂ ನೀಡಿದ್ದಾರೆ.

ಮಾ.28 ರಂದು ಸಹ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ವಿಜಯ್ ಪ್ರಕಾಶ್ ಅವರು ದಾಸರಕೊಪ್ಪಲು ಗ್ರಾಮದ ಅಂಗನವಾಡಿ ಕೇಂದ್ರ, ಅಲ್ಲದೆ ಹರಳಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. (ಎನ್.ಬಿ)

Leave a Reply

comments

Related Articles

error: