ಮೈಸೂರು

ಪ್ರತಿಯೊಬ್ಬ ಪ್ರಜೆಯೂ ಅಮೂಲ್ಯ ಮತದಾನದ ಮೂಲಕ ದೇಶದಲ್ಲಿ ಒಳ್ಳೆಯ ಸರ್ಕಾರ ತರುವ ಕಾರ್ಯ ಮಾಡಬೇಕು : ಡಾ.ಡಿ.ವೀರೇಂದ್ರ ಹೆಗ್ಗಡೆ

ಎಂಎಂಕೆ &ಎಸ್ ಡಿಎಂ ಮಹಿಳಾ ವಿದ್ಯಾಲಯದ ‘ಮತದಾನ ಜಾಗೃತಿ ಜಾಥಾ’

ಮೈಸೂರು,ಮಾ.30:- ಪ್ರಜಾಸತ್ತೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ಕೂಡ ತನ್ನ ಅಮೂಲ್ಯವಾದ ಮತದಾನ ಮಾಡುವ ಮೂಲಕ ದೇಶದಲ್ಲಿ ಒಳ್ಳೆಯ ಸರ್ಕಾರವನ್ನು ತರುವ ಕಾರ್ಯ ಮಾಡಬೇಕಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.

ಅವರಿಂದು ಕೃಷ್ಣಮೂರ್ತಿಪುರಂನಲ್ಲಿರುವ ಎಂಎಂಕೆ &ಎಸ್ ಡಿಎಂ ಮಹಿಳಾ ವಿದ್ಯಾಲಯದ ಆವರಣದಲ್ಲಿ ಎನ್ ಎಸ್ ಎಸ್, ವೈಆರ್ ಸಿ ರೇಂಜರ್ಸ್ ಘಟಕಗಳ ವತಿಯಿಂದ ಹಮ್ಮಿಕೊಳ್ಳಲಾದ ‘ಮತದಾನ ಜಾಗೃತಿ ಜಾಥಾ’ ಕಾರ್ಯಕ್ರಮವನ್ನು ಉದ್ಘಾಟಿಸಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ನಾವಿಂದು ದೇಶದಲ್ಲಿ ದೇಶಕಟ್ಟು ಕಾರ್ಯದಲ್ಲಿ ತೊಡಗಿದ್ದೇವೆ. ಮುಖ್ಯವಾಗಿ ನಾವು ಪ್ರಾರ್ಥಿಸುವ ದೇವತೆ ಭಾರತಮಾತೆ. ಭಾರತಮಾತೆಯನ್ನು ನಾವೆಲ್ಲರೂ ಮಕ್ಕಳಾಗಿ ಗೌರವಿಸುತ್ತೇವೆ. ಪ್ರೀತಿಸುತ್ತೇವೆ. ಆದರ್ಶ ಪಾಲಿಸುತ್ತೇವೆ. ಭಾರತ ಮಾತೆ ಎಂದಾಕ್ಷಣ ನಮ್ಮ ಮೈಯ್ಯಲ್ಲಿ ವಿದ್ಯುತ್ ಸಂಚಾರವಾಗುತ್ತದೆ. ಶ್ರದ್ಧೆ ಬರುತ್ತದೆ. ಈ ಸಂದರ್ಭದಲ್ಲಿ ನಮ್ಮ ತಾಯಿ ನಮ್ಮನ್ನು ಯಾವ ರೀತಿ ಸಲಹಿ ಸಂರಕ್ಷಿಸಿದ್ದಾಳೋ ಅದೇ ರೀತಿ ಭಾರತಮಾತೆಯೂ ನಮ್ಮನ್ನು ಸಂರಕ್ಷಿಸಿದ್ದು, ನಾವು ಬೆಳೆದಾಗ ತಾಯಿಯನ್ನು ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಆ ತಾಯಿಯ ಋಣ ತೀರಿಸಲು ತಾಯಿಯ ಸೇವೆ ಮಾಡಬೇಕು. ಭಾರತ ಮಾತೆಯ ಋಣ ನಮ್ಮ ಮೇಲೆ ಎಷ್ಟಿದೆ ಎಂದರೆ ಎಂದಿಗೂ ಅದನ್ನು ತೀರಿಸಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ತಾಯಿ ಭಾರತ ಮಾತೆಗೆ ಪ್ರಜಾಸತ್ತೆಯ ಮೂಲಕ ಕೊಡಿಗೆ ನೀಡಬೇಕು. ಪ್ರಜಾಸತ್ತೆಯೇ ದೇಶದ ಆಗುಹೋಗುಗಳನ್ನು  ನೋಡಿಕೊಳ್ಳುವಂತದ್ದು. ಹಾಗಾಗಿ ಪ್ರಜಾಸತ್ತೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ಕೂಡ ತನ್ನ ಅಮೂಲ್ಯ ಮತದಾನ ಮಾಡುವ ಮೂಲಕ ದೇಶದಲ್ಲಿ ಒಳ್ಳೆಯ ಸರ್ಕಾರವನ್ನು ತರುವ ಕಾರ್ಯ ಮಾಡಬೇಕು ಎಂದರು. ಒಳ್ಳೆಯ ಸರ್ಕಾರ ಬರಬೇಕಾದರೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸಬೇಕು. ಯಾವುದೇ ಪಕ್ಷ, ಯಾವುದೇ ವ್ಯಕ್ತಿ, ಮತದಾರರಿಗೆ ಇಷ್ಟವಾಗತ್ತೊ ಅವರನ್ನು ಆಯ್ಕೆ ಮಾಡಿ ಕಳುಹಿಸಬೇಕು. ಆದರೆ ಯಾವುದೇ ಕಾರಣಕ್ಕೂ ಉದಾಸೀನ ಮಾಡದೇ,  ಆಲಸ್ಯ ತೋರದೆ, ಹೋಗ್ಲಿ ಬಿಡು ಏನಾಗತ್ತೆ ಎಂಬ ಭಾವನೆಯಿಂದ ಮತದಾನದ ಹಕ್ಕಿನಿಂದ ವಂಚಿತರಾದರೆ ತಾಯಿಯ ಸೇವೆಯಿಂದ ವಂಚಿತರಾದ ಹಾಗೆ ಎಂದು ತಿಳಿಸಿದರು. ಮೊದಲ ಬಾರಿ ನೋಂದಣಿ ಮಾಡಿಸಿಕೊಂಡವರಿಗೆ ನನ್ನ ಅಭಿನಂದನೆಗಳು ಎಂದ ಅವರು ಯಾರು ಮತ ಹಾಕುತ್ತೀರೋ ಅವರು ಬಿಸಿಲಿನಲ್ಲಿ ನಿಲ್ಲಿ. ಮತ ಹಾಕದವರು ನೆರಳಿನಲ್ಲಿ ನಿಲ್ಲಿ.  ದೇಶಕ್ಕೆ ತ್ಯಾಗ ಮಹತ್ವದ್ದು. ದೇಶಕ್ಕಾಗಿ ತ್ಯಾಗ ಮಾಡುವ, ಉತ್ಸಾಹ ತೋರುವ, ಹಠ ಬೆಳೆಸಿಕೊಳ್ಳುವ ಮನೋಭಾವ ನಮ್ಮಲ್ಲಿ ಬರಬೇಕು. ಟಿವಿಯಲ್ಲಿ ಏನೋ ಪ್ರೋಗ್ರಾಂ ಇದೆ, ಮತ್ತೇನೋ ಕೆಲಸವಿದೆ ಎಂದು ಮತದಾನ ಮಾಡದೇ ಇರಬೇಡಿ. ನಿಮ್ಮ ಮನೆಗಳಲ್ಲಿರುವ ಹಿರಿಯರಿಗೂ ಮತದಾನ ಮಾಡಲು ತಿಳಿಸಿ ಎಂದರು. ಮತದಾನದ ದಿನದಂದು ಮತ ಚಲಾಯಿಸಿ ಒಳ್ಳೆಯ ಪ್ರತಿನಿಧಿಯ ಮೂಲಕ ಒಳ್ಳೆಯ ಸರ್ಕಾರ ಆಯ್ಕೆ ಮಾಡಿ, ಪರೀಕ್ಷೆಯಲ್ಲಿ ಚೆನ್ನಾಗಿ ಅಂಕ ಪಡೆದು ಉತ್ತೀರ್ಣರಾಗಿ ಶ್ರೀಮಂಜುನಾಥ ಸ್ವಾಮಿಯ ಕೃಪೆ ನಿಮ್ಮ ಮೇಲಿರಲಿ ಎಂದು ಶುಭ ಹಾರೈಸಿದರು.

ಪಾಲಿಕೆಯ ಆಯುಕ್ತೆ ಶಿಲ್ಪನಾಗ್ ‘ಪ್ರಜಾಪ್ರಭುತ್ವದ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ, ಧರ್ಮ, ಜನಾಂಗ, ಜಾತಿ, ಮತ, ಭಾಷೆ ಯಾವುದೇ ಪ್ರೇರೇಪಣೆಗಳ, ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೇ ಮತ ಚಲಾಯಿಸುತ್ತೇವೆಂದು’ ಈ ಮೂಲಕ ಪ್ರತಿಜ್ಞೆ ಮಾಡುತ್ತೇವೆಂದು ಪ್ರತಿಜ್ಞಾ ವಿಧಿ ಬೋಧಿಸಿದರು.

ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜ್ಯೋತಿ ಮಾತನಾಡಿ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಮತದಾರರಿಗೆ ಮತ ಚಲಾಯಿಸುವಂತೆ ಪ್ರೇರೇಪಿಸುವುದು ಮತ್ತು ಜಿಲ್ಲೆಯಲ್ಲಿ ಶೇಖಡಾವಾರು ಫಲಿಶಾಂಶ ಹೆಚ್ಚಿಸುವ ಕಾರ್ಯವನ್ನು ಸಿಇಒಗಳಿಗೆ ಒಪ್ಪಿಸಿದ್ದಾರೆ. ಜಿಲ್ಲಾಡಳಿತ ಮಾತ್ರವಲ್ಲದೇ, ಸಂಘಸಂಸ್ಥೆಗಳು, ಕಾಲೇಜುಗಳು, ಆಸ್ಪತ್ರೆಗಳು, ಖಾಸಗಿ ಸಂಸ್ಥೆಗಳು ತೊಡಗಿಸಿಕೊಂಡಿದ್ದು ಜಿಲ್ಲಾಡಳಿತಕ್ಕೆ ಬಲಬಂದಿದೆ. ನಾಗರಿಕರು ಕೂಡ ಉತ್ಸಾಹ ತೋರಿಸುತ್ತಿದ್ದಾರೆ. ಅವರಿಗೆ ಅಭಿನಂದನೆಗಳು ಎಂದರು. ಎಲ್ಲರೂ ಕಡ್ಡಾಯವಾಗಿ, ನಿರ್ಭೀತರಾಗಿ, ನೈತಿಕವಾಗಿ ಮತದಾನ ಮಾಡಿ, ನಿಮ್ಮ ಸ್ನೇಹಿತರು, ನೆರೆಹೊರೆಯವರಿಗೂ ಮತಚಲಾಯಿಸುವಂತೆ ತಿಳಿಸಿ ಎಂದರು.

ಈ ಸಂದರ್ಭ ಹೆಚ್ಚುವರಿ ಆಯುಕ್ತರಾದ ಶಿವಾನಂದ ಮೂರ್ತಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸಾಯಿನಾಥ್ ಮಲ್ಲಿಗೆ ಮಾಡು, ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ವಿ.ಆಶಾ   ವೈಆರ್ ಸಿ ಘಟಕದ ಸಂಯೋಜಕ ಶಿವಬೀರಪ್ಪ, ರೇಂಜರ್ಸ್ ಘಟಕದ ಸಂಯೋಜಕಿ ಮಾಲತಿ, ರಾ.ಸೇ.ಯೋ.ಕಾರ್ಯಕ್ರಮಾಧಿಕಾರಿ ಬಿ.ಎನ್.ಮಾರುತಿ ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.

ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಮತದಾನದ ಕುರಿತು ಅರಿವು ಮೂಡಿಸಿತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: