ಮೈಸೂರು

ಕನ್ನಡ ಭಾಷೆಯ ಮೇಲೆ ರಾಜ್ಯ ಸರ್ಕಾರದ ತೀವ್ರ ನಿರ್ಲಕ್ಷ್ಯ : ಕದಂಬ ಸೈನ್ಯ ಆಕ್ರೋಶ

ವಾಣಿಜ್ಯೋದ್ಯಮಿಗಳು, ವ್ಯಾಪಾರಸ್ಥರು ಮತ್ತು ಚಲನಚಿತ್ರರಂಗದವರು ಕನ್ನಡವನ್ನು ನಿರ್ಲಕ್ಷಿಸಿ ತುಳಿಯುತ್ತಿದ್ದಾರೆ ಎಂದು ಕದಂಬ ಸೈನ್ಯದ ಸಂಸ್ಥಾಪಕ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಪತ್ರಕರ್ತ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಣಿಜ್ಯೋದ್ಯಮಿಗಳು ವ್ಯಾಪಾರಸ್ಥರು, ಅಂಗಡಿ ಮಳಿಗೆಯವರು, ಹೋಟೆಲ್, ಬೇಕರಿ, ಡಾಬಾ ಮಾಲೀಕರು, ಮೊಬೈಲ್ ಕಂಪನಿಗಳು ನಾಮಫಲಕಗಳಲ್ಲಿ ಕನ್ನಡದಲ್ಲಿ ಚಿಕ್ಕದಾಗಿ ಬರೆಸಿ, ಪ್ರದರ್ಶಿಸಿ ಕನ್ನಡ ಭಾಷೆಗೆ ಪ್ರತಿನಿತ್ಯ ಅವಮಾನ ಮಾಡುತ್ತಿದ್ದಾರೆ. ಇಂಗ್ಲೀಷ್, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿ ನಾಮಫಲಕಗಳು ರಾರಾಜಿಸುತ್ತಿವೆ ಎಂದು ಆರೋಪಿಸಿದರು.

ಅಲ್ಲದೇ ಕನ್ನಡ ಚಲನಚಿತ್ರರಂಗದಲ್ಲಿ ಇತ್ತೀಚೆಗೆ ಆಂಗ್ಲ ಭಾಷೆಯ ಶೀರ್ಷಿಕೆಯಲ್ಲಿ ಸಿನಿಮಾಗಳು ಬರುತ್ತಿವೆ. ಕಿರಿಕ್ ಪಾರ್ಟಿ, ಸಿಲಿಕಾನ್ ಸಿಟಿ, ಲಾಸ್ಟ್ ಬಸ್, ತರ್ಲೆ ವಿಲೇಜ್ ಇತ್ಯಾದಿ ಸಿನಿಮಾಗಳಲ್ಲಿ ಕನ್ನಡ ಮತ್ತು ಇಂಗ್ಲೀಷ್ ಮಿಶ್ರಣವಾಗಿವೆ. ಪರಭಾಷೆಗಳಲ್ಲೇ ಸಂಭಾಷಣೆಗಳನ್ನು ಬಳಸುತ್ತಿದ್ದಾರೆ. ಆಂಗ್ಲ ಭಾಷೆಯ ಜತೆಗೆ ಕನ್ನಡಾಂಗ್ಲ ಭಾಷೆಯನ್ನು ಸೃಷ್ಟಿಸಿದ್ದಾರೆ ಎಂದರು.

ರಾಜ್ಯ ಸರ್ಕಾರವು ಸಹ ಕನ್ನಡ ಭಾಷೆಯ ಬಗೆಗೆ ನಿರ್ಲಕ್ಷ್ಯ ತೋರುತ್ತಿದ್ದು, ಕೇವಲ ಕನ್ನಡ ಪರ ಸಂಘಟನೆಗಳು ಮಾತ್ರ ಕನ್ನಡದ ಉಳಿವಿಗಾಗಿ ಹೋರಾಟ ನಡೆಸುತ್ತಿವೆ. ರಾಜ್ಯ ಸರ್ಕಾರವು ಶೇ.85 ಭಾಗ ಕನ್ನಡದಲ್ಲಿ ಸಂಭಾಷಣೆ, ಶೀರ್ಷಿಕೆ, ಭಿತ್ತಿಪತ್ರ ಹಾಗೂ ಜಾಹೀರಾತುಗಳಲ್ಲಿ ಸಂಪೂರ್ಣವಾಗಿ ಕನ್ನಡ ಭಾಷೆ ಇರುವ ಚಲನಚಿತ್ರಗಳಿಗೆ ಸಹಾಯಧನ ಮತ್ತು ಪ್ರಶಸ್ತಿಗಳನ್ನು ನೀಡಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಎಸ್.ಶಿವಕುಮಾರ್, ಎನ್.ಸಿ.ಕಾಂಬಳೆ, ರಮೇಶ್ ಯರಗುದಿ, ಪ್ರಕಾಶ ಗು.ರಾಮದುರ್ಗ ಮತ್ತಿತರರು ಹಾಜರಿದ್ದರು.

Leave a Reply

comments

Related Articles

error: