ಪ್ರಮುಖ ಸುದ್ದಿ

ಕೋಮುವಾದಿ ಬಿಜೆಪಿ ಪಕ್ಷವನ್ನು ದೂರವಿಡಲು ದೇವೇಗೌಡ-ಸಿದ್ದರಾಮಯ್ಯ ರಿಂದ ಜಂಟಿ ಪ್ರಚಾರ : ಸಚಿವ ಪುಟ್ಟರಾಜು

ರಾಜ್ಯ(ಮಂಡ್ಯ)ಮಾ.30:- ಕೃಷ್ಣರಾಜಪೇಟೆ ಪಟ್ಟಣದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಎಸ್.ಪುಟ್ಟರಾಜು ಅವರ ನೇತೃತ್ವದಲ್ಲಿ   ಜೆಡಿಎಸ್ ಕಾರ್ಯಕರ್ತರ ಸಭೆ ನಡೆಯಿತು.

ಮಂಡ್ಯ ಜಿಲ್ಲೆಯು ಜೆಡಿಎಸ್ ಭದ್ರಕೋಟೆ ಎಂಬುದನ್ನು ಸಾಧಿಸಿ ತೋರಿಸಲು ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಭಾರೀ ಬಹುಮತಗಳ ಅಂತರದಿಂದ ಗೆಲ್ಲಿಸಿ ವಿಜಯಮಾಲೆ ತೊಡಿಸಲು ಹಗಲಿರುಳೆನ್ನದೇ ದುಡಿಯಬೇಕು ಎಂದು ಕಾರ್ಯಕರ್ತರು ಹಾಗೂ ಮುಖಂಡರಿಗೆ ಸಚಿವ ಪುಟ್ಟರಾಜು ಮನವಿ ಮಾಡಿದರು.

ಕೇಂದ್ರದ ಸಚಿವರಾಗಿ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಸಮರ್ಥವಾಗಿ ಸಂಘಟಿಸಿದ್ದ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ನೀಡದೇ ಅವರ ಕುಟುಂಬವನ್ನು ನಡು ನೀರಿನಲ್ಲಿ ಕೈಬಿಟ್ಟ ಬಿಜೆಪಿ ಮುಖಂಡರು ಮಂಡ್ಯದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ತಮ್ಮ ಬೌದ್ಧಿಕ ದಿವಾಳಿತನವನ್ನು ಪ್ರದರ್ಶನ ಮಾಡಿದ್ದಾರೆ. ರಾಜಕೀಯ ಸೇಡಿಗಾಗಿ ಐಟಿ ರೇಡ್ ಮಾಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನನ್ನ ರಾಜಕೀಯ ಜೀವನ ಮತ್ತು ಆರ್ಥಿಕ ವ್ಯವಹಾರಗಳು ತೆರೆದ ಪುಸ್ತಕವಾಗಿವೆ. ನೂರು ಬಾರಿ ಐಟಿ ದಾಳಿ ಮಾಡಿಸಿದರೂ ನಾನು ಬಗ್ಗಲ್ಲ. ನಮ್ಮ ಉತ್ಸಾಹ ಕಡಿಮೆಯಾಗಲ್ಲ. ಜಿಲ್ಲೆಯ ಜನತೆ ಸ್ವಾಭಿಮಾನದ ಉಳಿವಿಗಾಗಿ, ಜಿಲ್ಲೆಯ ಸಮಗ್ರವಾದ ಅಭಿವೃದ್ಧಿಗೆ ಜೆಡಿಎಸ್ ಬೆಂಬಲಿಸಿ ರೈತರ ಅಭ್ಯುದಯವನ್ನು ಗುರಿಯನ್ನಾಗಿಸಿಕೊಂಡು ಕೆಲಸ ಮಾಡುತ್ತಿರುವ ಮೈತ್ರಿ ಸರ್ಕಾರಕ್ಕೆ ಶಕ್ತಿ ತುಂಬಬೇಕು ಎಂದು  ಕೈಮುಗಿದು ಮನವಿ ಮಾಡಿದರು.

ಮಾಜಿ ಪಿಎಂ ದೇವೇಗೌಡ ಮಾಜಿ ಸಿಎಂ ಸಿದ್ಧರಾಮಯ್ಯ ಜಂಟಿ ಪ್ರಚಾರ

ಕೋಮುವಾದಿ ಬಿಜೆಪಿ ಪಕ್ಷವನ್ನು ದೂರವಿಡಲು, ರಾಜ್ಯದಲ್ಲಿ ಜನತೆ ನೆಮ್ಮದಿಯ ಜೀವನ ನಡೆಸಲು ಅನುಕೂಲವಾಗಲು ಮಾಜಿ ಪ್ರಧಾನಿ ದೇವೇಗೌಡರು ಮತ್ತು ಸಮನ್ವಯ ಸಮಿತಿಯ ಅಧ್ಯಕ್ಷರಾದ ಸಿದ್ಧರಾಮಯ್ಯ ಅವರು ಮಂಡ್ಯ ಸೇರಿದಂತೆ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲೂ ರಾಜ್ಯದಾದ್ಯಂತ ಜಂಟಿ ಪ್ರಚಾರ ನಡೆಸಿ ಮತಯಾಚನೆ ಮಾಡಲಿದ್ದಾರೆ ಎಂದು ಹೇಳಿದರು. ಕಬ್ಬಿನ ಬೆಳೆಗೆ ನೀರು ತಾಲೂಕಿನಲ್ಲಿ ನೀರಿಲ್ಲದೇ ಒಣಗುತ್ತಿರುವ ಕಬ್ಬಿನ ಬೆಳೆಯನ್ನು ಉಳಿಸಲು ಹೇಮಾವತಿ ನದಿಗೆ ಗೊರೂರು ಜಲಾಶಯದಿಂದ ನೀರನ್ನು ಹರಿಸಿ ಮಂದಗೆರೆ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ಮೂಲಕ ನೀರನ್ನು ಹರಿಸಲಾಗುವುದು ಎಂದು ಪುಟ್ಟರಾಜು ಹೇಳಿದರು. ಶಾಸಕ ನಾರಾಯಣಗೌಡ ಸಭೆಯ ನೇತೃತ್ವ ವಹಿಸಿದ್ದರು. ತಾಲೂಕು ಜೆಡಿಎಸ್ ಅಧ್ಯಕ್ಷ ವೆಂಕಟ ಸುಬ್ಬೇಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪುರಸಭೆ ಮಾಜಿಅಧ್ಯಕ್ಷ ನೂರುಲ್ಲಾಖಾನ್, ಮುಖಂಡರಾದ ಹೊಸಹೊಳಲು ರಘು ಮತ್ತು ಸಿಂಗನಹಳ್ಳಿ ಸುರೇಶ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.  ಜಿ.ಪಂ ಸದಸ್ಯ ಹೆಚ್.ಟಿ.ಮಂಜು, ಮುಖಂಡ ಕೆ.ಶ್ರೀನಿವಾಸ್, ಪುರಸಭೆ ಮಾಜಿಅಧ್ಯಕ್ಷ ಕೆ.ಟಿ.ಗಂಗಾಧರ ಸಭೆಯಲ್ಲಿ ಮಾತನಾಡಿದರು. ನೂರಾರು ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: