ಕ್ರೀಡೆ

ಐಪಿಎಲ್: ರಾಜಸ್ತಾನ ವಿರುದ್ಧ ಹೈದರಾಬಾದ್ ಗೆ 5 ವಿಕೆಟ್‌ಗಳ ಗೆಲುವು

ಹೈದರಾಬಾದ್,ಮಾ.30-ಐಪಿಎಲ್ ಟೂರ್ನಿಯಲ್ಲಿ ರಾಜಸ್ತಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡ 5 ವಿಕೆಟ್‌ಗಳ ಜಯಗಳಿಸಿದೆ.

ಡೇವಿಡ್ ವಾರ್ನರ್ ಭರ್ಜರಿ ಅರ್ಧಶತಕ, ಜಾನಿ ಬೈರ್‌ಸ್ಟೋ ಹಾಗೂ ವಿಜಯಶಂಕರ್ ಬಿರುಸಿನ ಆಟದ ಫಲವಾಗಿ ಹೈದರಾಬಾದ್ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ತಾನ ರಾಯಲ್ಸ್ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 198 ರನ್‌ಗಳ ಬೃಹತ್ ಮೊತ್ತ ಗಳಿಸಿತ್ತು. ತಂಡದ ಪರ ಇನಿಂಗ್ಸ್ ಆರಂಭಿಸಿದ ರಹಾನೆ (70), ಜೋಸ್ ಬಟ್ಲರ್ (5) 15 ರನ್‌ಗಳಾಗುವಷ್ಟರಲ್ಲಿ ಬೇರ್ಪಟ್ಟರು. ರಶೀದ್ ಖಾನ್, ಬಟ್ಲರ್ ಅವರನ್ನು ಬೌಲ್ಡ್ ಮಾಡಿದರು. ಆ ಬಳಿಕ ಜೊತೆಗೂಡಿದ ರಹಾನೆ ಹಾಗೂ ಯುವ ಆಟಗಾರ ಸ್ಯಾಮ್ಸನ್ (ಅಜೇಯ 102) ಚೇತರಿಕೆ ನೀಡಿದರು. ರಹಾನೆ ಅವರನ್ನು ಶಾಬಾಝ್ ನದೀಮ್ ತಮ್ಮ ಸ್ಪಿನ್ ಬಲೆಗೆ ಕೆಡವಿದರು. ಬಳಿಕ ಬೆನ್ ಸ್ಟೋಕ್ಸ್ (ಅಜೇಯ 16) ಸ್ಯಾಮ್ಸನ್‌ಗೆ ಉತ್ತಮ ಸಾಥ್ ನೀಡಿದರು. ರಶೀದ್ 24 ರನ್ ವ್ಯಯಿಸಿ 1 ವಿಕೆಟ್ ಪಡೆದು ಪರಿಣಾಮಕಾರಿ ಎನಿಸಿದರು.

199 ರನ್ ಗಳ ಗುರಿ ಬೆನ್ನತ್ತಿದ್ದ ಹೈದರಾಬಾದ್ 19 ಓವರ್‌ಗಳಲ್ಲಿ 201 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಹೈದರಾಬಾದ್ ಪರ ಇನಿಂಗ್ಸ್ ಆರಂಭಿಸಿದ ವಾರ್ನರ್(69), ಬೈರ್‌ಸ್ಟೋ(45) ಮೊದಲ ವಿಕೆಟ್‌ಗೆ 110 ರನ್‌ಗಳ ಜೊತೆಯಾಟ ನೀಡಿದರು. ಬೈರ್‌ಸ್ಟೋ ಅವರು ಶ್ರೇಯಸ್ ಗೋಪಾಲ್‌ಗೆ ಬಲಿಯಾದರು. ಕೇನ್ ವಿಲಿಯಮ್ಸನ್ (14) ಹೆಚ್ಚು ಹೊತ್ತು ನಿಲ್ಲಲಿಲ್ಲ. ವಿಜಯಶಂಕರ್ (35) ಭರ್ಜರಿ ಆಟವಾಡಿದರು. ಮನೀಷ್ ಪಾಂಡೆ (1) ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸಾದರು. ಹೈದರಾಬಾದ್ ತಂಡದ ಮೂರು ವಿಕೆಟ್ ದಿಢೀರ್ ಪತನವಾದವು. ಅಂತಿಮವಾಗಿ ಯೂಸುಫ್ ಪಠಾಣ್ (16), ರಶೀದ್ ಖಾನ್ (15 ) ಹೈದರಾಬಾದ್‌ನ್ನು ಯಶಸ್ವಿಯಾಗಿ ಗೆಲುವಿನ ದಡ ಸೇರಿಸಿದರು. 19 ಓವರ್‌ಗಳಲ್ಲಿ 201 ರನ್ ಗಳಿಸಿತು.  ಆತಿಥೇಯ ತಂಡ ಗೆಲುವು ಸಾಧಿಸಿತು. ಶ್ರೇಯಸ್ ಗೋಪಾಲ್ ರಾಜಸ್ಥಾನ ಪರ ಮೂರು ವಿಕೆಟ್ ಉರುಳಿಸಿದರು. (ಎಂ.ಎನ್)

Leave a Reply

comments

Related Articles

error: