ಕರ್ನಾಟಕ

ಮಂಡ್ಯದಲ್ಲಿ ಜಂಟಿ ಪ್ರಚಾರ ನಡೆಸಲಿರುವ ದೇವೇಗೌಡ-ಸಿದ್ದರಾಮಯ್ಯ

ಕೆ.ಆರ್.ಪೇಟೆ (ಮಾ.30): ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯದಲ್ಲಿ ದೇವೇಗೌಡರು ಮತ್ತು ಸಿದ್ಧರಾಮಯ್ಯ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವಂತೆ ತೀರ್ಮಾನವಾಗಿದ್ದು, ಏಪ್ರಿಲ್ ಮೊದಲ ವಾರದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಎಲ್ಲಾ ತಾಲೂಕಿಗೂ ಸಿದ್ದರಾಮಯ್ಯ ಮತ್ತು ದೇವೇಗೌಡರು ಜಂಟಿ ಚುನಾವಣಾ ಪ್ರಚಾರ ಮಾಡುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ಪಟ್ಟಣದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಏ.1ರಂದು ಮಂಡ್ಯ ಲೋಕಸಭಾ ಅಭ್ಯರ್ಥಿ ಪರ ಚುನಾವಣಾ ಪ್ರಚಾರವನ್ನು ಕಸಬಾ, ಕಿಕ್ಕೇರಿ, ಸಂತೇಬಾಚಹಳ್ಳಿ ಹೋಬಳಿಗಳಲ್ಲಿ ಮಾಡಲಿದ್ದಾರೆ ಹಾಗಾಗಿ ಅಂದು ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ಮನವಿ ಮಾಡಿದರು.

ನಿಖಿಲ್ ಕುಮಾರಸ್ವಾಮಿಯನ್ನು ಅಭ್ಯರ್ಥಿ ಮಾಡಿರೋದು ಹುಡುಗಾಟ ಆಡಲಿಕ್ಕಲ್ಲ. ಜಿಲ್ಲೆಯ ಅಭಿವೃದ್ದಿಯ ಹಿತದೃಷ್ಠಿಯಿಂದ ಅವರನ್ನು ಜಿಲ್ಲೆಯ ಶಾಸಕರು ಹಾಗೂ ಮುಖಂಡರು ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿ ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ ಎಂದು ಹೇಳಿದರು. ಶ್ರೀರಂಗಪಟ್ಟಣದಿಂದ ಕೆ.ಆರ್.ಪೇಟೆ, ಕಿಕ್ಕೇರಿ, ಚ.ರಾ.ಪಟ್ಟಣ ಮಾರ್ಗವಾಗಿ ಅರಸೀಕೆರೆ ವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಮಾಡುವುದಾಗಿ ಹೇಳಿದರು. ಶಾಸಕ ಕೆ.ಸಿ.ನಾರಾಯಣಗೌಡ ಮಾತನಾಡಿ, ತಾಲೂಕಿನಲ್ಲಿ ನನಗೆ ಯಾವುದೇ ನಿಗಮ ಮಂಡಳಿಗೆ ಅಧ್ಯಕ್ಷನನ್ನಾಗಿ ಮಾಡದಿದ್ದರೂ ಪರವಾಗಿಲ್ಲ.

ಇದಕ್ಕೇ ಯಾವುದೇ ಬೇಜಾರು ಮಾಡ್ಕೊಳಲ್ಲ. ತಾಲೂಕಿನ ಅಭಿವೃದ್ಧಿಗಾಗಿ ಬಂದಿರುವ ನನಗೆ ನನ್ನ ತಾಲೂಕಿನ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುವ ಮೂಲಕ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ, ಶಾಸಕ ನಾರಾಯಣಗೌಡ, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಕೆ.ಆರ್.ಹೇಮಂತ್‍ಕುಮಾರ್, ಜಿ.ಪಂ.ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಟಿ ಮಂಜು, ಜಿಪಂ ಮಾಜಿ ಅಧ್ಯಕ್ಷೆ ಡಾ.ಜೆ.ಪ್ರೇಮಕುಮಾರಿ, ಮಾಜಿ ಉಪಾಧ್ಯಕ್ಷ ಡಾ.ಕೆ.ಎಸ್.ಪ್ರಭಾಕರ್, ಮುಖಂಡರಾದ ಕೆ.ಶ್ರೀನಿವಾಸ್, ಕೆ.ಎಸ್.ರಾಮೇಗೌಡ, ಕೆ.ಟಿ.ಗಂಗಾಧರ್, ನೂರುಲ್ಲಾಖಾನ್, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ರಾಜು ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: