ಮೈಸೂರು

ಕೆಎಸ್ ಆರ್ ಟಿಸಿ ಬಸ್ -ಪೊಲೀಸ್ ಜೀಪ್ ಮುಖಾಮುಖಿ : ಜೀಪ್ ಚಾಲಕ, ಇನ್ಸಪೆಕ್ಟರ್ ಸಾವು

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಪೊಲೀಸ್ ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಜೀಪ್ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೃತರನ್ನು ಡಿಆರ್  ಪೊಲೀಸ್ ಮೈಸೂರು ನಿವಾಸಿ ಲಕ್ಷ್ಮಣ( 37) ಎಂದು ಗುರುತಿಸಲಾಗಿದೆ. ಸುತ್ತೂರು ಜಾತ್ರೆಗೆ ವಿಶೇಷ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಜಿಲ್ಲಾ ಅಪರಾಧ ವಿಭಾಗದ  ಸರ್ಕಲ್ ಇನ್ಸಪೆಕ್ಟರ್ ಮಹೇಶ್ ಕುಮಾರ್ ಹಾಗೂ ಮತ್ತೋರ್ವ ಪೊಲೀಸ್ ಸಿಬ್ಬಂದಿಯನ್ನು ಕರೆದೊಯ್ಯುವ ಮಾರ್ಗ ಮಧ್ಯೆ ಮೈಸೂರು-ಟಿ.ನರಸೀಪುರ ಮುಖ್ಯ ರಸ್ತೆಯಲ್ಲಿ ಚಿಕ್ಕಹಳ್ಳಿ ಬಳಿ ಈ ದುರ್ಘಟನೆ ನಡೆದಿದೆ.

ಎದುರಿನಿಂದ ಬಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಮೈಸೂರು-ಕೆ.ಆರ್.ಪೇಟೆ ಪಾಂಡವಪುರ ಬಸ್, ಮೈಸೂರಿನಿಂದ ತೆರಳುತ್ತಿದ್ದ ಪೊಲೀಸ್ ಜೀಪ್ ಗೆ ಡಿಕ್ಕಿ ಹೊಡೆದ ಪರಿಣಾಮ ಜೀಪ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ಜೀಪ್ ಸಂಪೂರ್ಣ ನುಜ್ಜುಗುಜ್ಜಾಗಿದೆ.

ಇನ್ಸಪೆಕ್ಟರ್ ಮಹೇಶ್ ಕುಮಾರ್ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.  ಇನ್ನೋರ್ವ ಪೊಲೀಸ್ ಸಿಬ್ಬಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸಿದ್ದಾರ್ಥ ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸಪೆಕ್ಟರ್ ಹರೀಶ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

comments

Related Articles

error: