ಕರ್ನಾಟಕಪ್ರಮುಖ ಸುದ್ದಿ

ಚಾಮರಾಜನಗರ: ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ತಪ್ಪಿದ ಬಾಲಕಿ ವಿವಾಹ

ಚಾಮರಾಜನಗರ (ಏ.1): ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣ ಬೆಳಕಿಗೆ ಬಂದಿದ್ದು, ಅಧಿಕಾರಿಗಳ ಸಮಯಪ್ರಜ್ಞೆಯಿಂದ ಬಾಲ್ಯ ವಿವಾಹವೊಂದನ್ನು ತಡೆಯಲಾಗಿದೆ.17 ವರ್ಷದ ಬಾಲಕಿಯನ್ನು ತಮಿಳುನಾಡಿನ ತಾಳವಾಡಿಯ ಬಸವೇಗೌಡ ಎಂಬುವರ ಪುತ್ರ ರಘು(26) ಎಂಬಾತನಿಗೆ ವಿವಾಹ ಮಾಡಿ ಕೊಡಲು ನಿಶ್ಚಯಿಸಿ ಗಾಜನೂರು ಗ್ರಾಮದಲ್ಲಿ ವಿವಾಹಕ್ಕೆ ತಯಾರಿ ನಡೆಸಲಾಗಿತ್ತು.

ಶನಿವಾರ ಸಂಜೆಯೇ ಬಾಲಕಿಯನ್ನು ಗಾಜನೂರಿಗೆ ಕರೆದೊಯ್ಯಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮದುವೆ ಮಾಡುತ್ತಿರುವ ವಧುವಿಗೆ ಇನ್ನೂ ಹದಿನೆಂಟು ವರ್ಷವಾಗಿಲ್ಲ. ಅಪ್ರಾಪ್ತೆ ಎಂಬುದು ಸ್ಥಳೀಯರಿಗೆ ಗೊತ್ತಾಗಿತ್ತಲ್ಲದೆ, ಈ ಸಂಬಂಧ ಮಕ್ಕಳ ಸಹಾಯವಾಣಿಗೆ ದೂರು ಬಂದ ಹಿನ್ನೆಲೆಯಲ್ಲಿ ತಂಡದ ಸದಸ್ಯರು ನಗರದ ಗ್ರಾಮಾಂತರ ಠಾಣೆ ಪೊಲೀಸರು, ಅಂಗನವಾಡಿ ಮೇಲ್ವಿಚಾರಕರು ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರ ಜತೆಗೆ ಗ್ರಾಮಕ್ಕೆ ತೆರಳಿದ್ದಾರೆ.

ಬಳಿಕ ವಧುವಿನ ಮನೆಗೆ ತೆರಳಿ ಅಪ್ರಾಪ್ತೆಯನ್ನು ಮದುವೆ ಮಾಡುವುದು ಕಾನೂನು ಪ್ರಕಾರ ಅಪರಾಧ ಎಂದು ಮದುವೆಗೆ ಯತ್ನಿಸಿದ ಪೋಷಕರಿಗೆ ಮನವರಿಕೆ ಮಾಡಿಕೊಡಲಾಯಿತಲ್ಲದೆ, ಬಳಿಕ ತಂಡದ ಸದಸ್ಯರು ಬಾಲಕಿಯನ್ನು ವಶಕ್ಕೆ ಪಡೆದು ಚಾಮರಾಜನಗರದ ಬಾಲಮಂದಿರಕ್ಕೆ ಒಪ್ಪಿಸಿ ಮದುವೆಯನ್ನು ತಡೆಹಿಡಿದಿದ್ದಾರೆ.

ಹೆಣ್ಣು ಮಕ್ಕಳಿಗೆ ವಿವಾಹ ಮಾಡಲು ಹದಿನೆಂಟು ವರ್ಷವಾಗಿರಬೇಕೆಂಬ ಕಾನೂನು ಇದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಬಾಲ್ಯ ವಿವಾಹ ನಡೆಯುತ್ತಿದ್ದು, ಕೆಲವೊಮ್ಮೆ ಮಾತ್ರ ಬೆಳಕಿಗೆ ಬರುತ್ತದೆ ಉಳಿದಂತೆ ಗೊತ್ತೇ ಆಗುವುದಿಲ್ಲ. ಆದರೆ ಇಲ್ಲಿ ಮಾತ್ರ ಅಧಿಕಾರಿಗಳು ಸಮಯಪ್ರಜ್ಞೆ ಮೆರೆತು ಬಾಲಕಿಯನ್ನು ರಕ್ಷಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: