
ಮನರಂಜನೆ
ತಮಿಳು ಸಿನಿಮಾದಲ್ಲಿ ಬಾಲಿವುಡ್ ಬಿಗ್ ಬಿ
ಚೆನ್ನೈ,ಏ.1-ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಅಮಿತಾಬ್ ತಮಿಳು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ತಮಿಳ್ವಾಣನ್ ನಿರ್ದೇಶಿಸುತ್ತಿರುವ ‘ಉಯರ್ನತ ಮಣಿದನ್‘ ಎಂಬ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮುಖ್ಯ ಪಾತ್ರ ಪೋಷಿಸಲಿದ್ದಾರೆ. ಈ ಚಿತ್ರದಲ್ಲಿ ಅಮಿತಾಬ್ಗೆ ಜೋಡಿಯಾಗಿ ರಮ್ಯಾಕೃಷ್ಣ ಅಭಿನಯಿಸಲಿದ್ದಾರೆ ಎಂದಿವೆ ಕಾಲಿವುಡ್ ಮೂಲಗಳು. ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರಕ್ಕಾಗಿ ಅಮಿತಾಬ್ 40 ದಿನಗಳ ಕಾಲ್ಶೀಟ್ ನೀಡಿದ್ದಾರೆ.
ಈ ಸಿನಿಮಾದಲ್ಲಿನ ತನ್ನ ಲುಕ್ನ್ನು ಅಮಿತಾಬ್ ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ಖ್ಯಾತ ನಿರ್ದೇಶಕ, ನಟ ಎಸ್.ಜೆ.ಸೂರ್ಯ ಸಹ ಟ್ವಿಟರ್ ನಲ್ಲಿ ಅಮಿತಾಬ್ ಜತೆಗಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
`ನನ್ನ ಜೀವನದಲ್ಲಿ ಆನಂದಕರವಾದ ಕ್ಷಣ ಇದು. ನಾನೆಂದೂ ನೋಡದ ಕನಸು ನನಸಾಗಿದೆ. ಅಮಿತಾಬ್ ಸರ್ ಜತೆಗೆ ಕೆಲಸ ಮಾಡುತ್ತಿದ್ದೇನೆ. ಈ ಅವಕಾಶ ಸಿಕ್ಕಿದ್ದಕ್ಕೆ ದೇವರಿಗೆ, ತಂದೆ ತಾಯಿಗೆ, ಸೂಪರ್ ಸ್ಟಾರ್ ರಜನಿಕಾಂತ್ಗೆ, ಎ.ಆರ್.ಮುರುಗದಾಸ್ಗೂ ಕೃತಜ್ಞತೆಗಳನ್ನು ತಿಳಿಸಬೇಕೆಂದಿದ್ದೇನೆ’ ಎಂದಿದ್ದಾರೆ.
ಈ ಅವಕಾಶ ನನಗೆ ಸಿಗುವಂತೆ ಮಾಡಿದ್ದು ಎ.ಆರ್.ಮುರುಗದಾಸ್. ಸಿನಿಮಾವನ್ನು ಘೋಷಿಸಿದ್ದು ರಜನಿ ಸಾರ್. ಹಾಗಾಗಿಯೇ ಅವರಿಗೂ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ ಎಂದಿದ್ದಾರೆ. ಈ ಚಿತ್ರದಲ್ಲಿ ಸೂರ್ಯ ಸಹ ಒಂದು ಮುಖ್ಯ ಪಾತ್ರ ಪೋಷಿಸುತ್ತಿದ್ದಾರೆ.
ಅಮಿತಾಬ್ ಈ ವರ್ಷ ಬ್ಯುಸಿಯಾಗಿದ್ದು, ಝಂಡ್, ಬ್ರಹ್ಮಾಸ್ತ್ರ, ಸೈರಾ ನರಸಿಂಹ ರೆಡ್ಡಿ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. (ಎಂ.ಎನ್)