ಪ್ರಮುಖ ಸುದ್ದಿ

ಮೋದಿ ವೈಭವೀಕರಣದ ಮೂಲಕ ಮತ ಗಳಿಕೆಯ ವಿಫಲ ಯತ್ನ : ಕೊಡಗು ಕಾಂಗ್ರೆಸ್ ಟೀಕೆ

ರಾಜ್ಯ(ಮಡಿಕೇರಿ) ಏ.2 :- ಭಾರತೀಯ ಜನತಾ ಪಾರ್ಟಿ ನರೇಂದ್ರಮೋದಿ ಅವರನ್ನು ವೈಭವೀಕರಿಸಿ, ವ್ಯಸನಕ್ಕೀಡು ಮಾಡುವ ಮೂಲಕ ಮತ ಪಡೆಯುವ ವಿಫಲ ಯತ್ನಕ್ಕೆ ಮುಂದಾಗಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ವಿ.ಪಿ.ಶಶಿಧರ್ ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯ ಎದುರು ಸೋಲುವ ಭೀತಿಯಿಂದ ಬಿಜೆಪಿ ಮಂದಿ ವಾಸ್ತವಕ್ಕೆ ದೂರವಾದ ವಿಚಾರಗಳನ್ನು ಮುಂದಿಟ್ಟುಕೊಂಡು ಹುರುಳಿಲ್ಲದ ಆರೋಪಗಳಲ್ಲಿ ತೊಡಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊಡಗಿನ ಅಸ್ತಿತ್ವಕ್ಕೆ ಮಾರಕವಾದ ಡಾ.ಕಸ್ತೂರಿ ರಂಗನ್ ವರದಿ ಜಾರಿಯ ಕರಡು ಅಧಿಸೂಚನೆ ಹೊರ ಬಿದ್ದು ಆರು ತಿಂಗಳು ಕಳೆದಿದೆ. ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಯೋಜನೆ ಜಾರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆಂದು ಈ ಹಿಂದೆ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬಿಜೆಪಿ ಸಂಸದರುಗಳು ಭರವಸೆ ನೀಡಿದ್ದರು. ಆದರೆ ಯೋಜನೆ ಜಾರಿಗೊಳ್ಳುವ ಹಂತದಲ್ಲಿರುವ ಬಗ್ಗೆ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ಇದೀಗ ಸಂಸದ ಪ್ರತಾಪಸಿಂಹ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಶಶಿಧರ್ ವ್ಯಂಗ್ಯವಾಡಿದರು.

ಸೂಕ್ಷ್ಮ ಪರಿಸರ ವಲಯದ ಅಂಚಿನಿಂದ ಬಫರ್ ಝೋನ್‍ನ್ನು ‘0’ ಗೆ ಸೀಮಿತಗೊಳಿಸಿದ್ದು, ಇದಕ್ಕೆ ಶಾಸಕರಗಳಾದ ಅಪ್ಪಚ್ಚು ರಂಜನ್ ಮತ್ತು ಜೆ.ಜಿ. ಬೋಪಯ್ಯ ಕಾರಣರೆಂದು ಸಂಸದ ಪ್ರತಾಪಸಿಂಹ ಅವರು ಹಸಿ ಸುಳ್ಳು ಹೇಳಿದ್ದರು. ಪ್ರತಾಪ ಸಿಂಹ ಅವರ ಕಾರ್ಯವೈಖರಿಯ ಬಗ್ಗೆ ಅವರದೇ ಪಕ್ಷದ ಎಂ.ಬಿ.ದೇವಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಇದೇ ಸಂದರ್ಭ ಅವರು ಉಲ್ಲೇಖಿಸಿದರು.

ಲೋಕಸಭಾ ಚುನಾವಣೆಯಲ್ಲಿ ಮೋದಿ ಮುಖ ನೋಡಿ ಮತ ಹಾಕುವಂತೆ ಇಲ್ಲಿನ ಅಭ್ಯರ್ಥಿ ಮನವಿ ಮಾಡುತ್ತಿದ್ದಾರೆ. ಮೋದಿ ಎಂದರೆ ಯಾರು ನೀರವ್ ಮೋದಿ, ಲಲಿತ್ ಮೋದಿಯೇ, ಮೋದಿ ಹೆಸರಿನಲ್ಲಿ ಮತ ಕೇಳುವ ನಿಮಗೆ ‘ಮುಖ’ ಇಲ್ಲವೇ ಎಂದು ಶಶಿಧರ್ ಪ್ರಶ್ನಿಸಿದರು.

ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರಮೈನಾ ಮಾತನಾಡಿ, ಶೂನ್ಯ ಸಿಂಹರನ್ನು ಬಿಟ್ಟು ಜನರಿಗೆ ತಮ್ಮ ಅಧಿಕಾರದ ಅವಧಿಯಲ್ಲಿ ನೆರವನ್ನು ನೀಡಿರುವ ಕಾಯಕ ಸಿಂಹ ವಿಜಯಶಂಕರ್ ಅವರನ್ನು ಕೊಡಗಿನ ಜನತೆ ಬೆಂಬಲಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಎಸ್.ಐ. ಮುನೀರ್ ಅಹಮ್ಮದ್, ಕುಶಾಲನಗರ ಬ್ಲಾಕ್ ಪದಾಧಿಕಾರಿ ಸಬಾಸ್ಟಿನ್, ಕುಶಾಲನಗರ ಬ್ಲಾಕ್ ಸಂಚಾಲಕ ಅಬ್ದುಲ್ ಖಾದರ್ ಹಾಗೂ ನಗರಸಭಾ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: