ಪ್ರಮುಖ ಸುದ್ದಿ

 ದಿ.ಶಂಕರ್ ಸ್ವಾಮಿ ಬೇಸಿಗೆ ಶಿಬಿರಕ್ಕೆ ಚಾಲನೆ : ಮನಸ್ಸನ್ನು ಗೆಲ್ಲಲು ಧ್ಯಾನ, ಯೋಗ ಸಹಕಾರಿ : ಬಿ.ಜಿ.ಅನಂತಶಯನ ಅಭಿಮತ

ರಾಜ್ಯ(ಮಡಿಕೇರಿ) ಏ.2 : – ಮನುಷ್ಯನ ಎಲ್ಲಾ ಚಟುವಟಿಕೆಗಳಿಗೆ ಮನಸ್ಸೇ ಮುಖ್ಯ ಕಾರಣವಾಗಿದ್ದು, ಮನಸ್ಸನ್ನು ಗೆಲ್ಲಲು ಧ್ಯಾನ ಮತ್ತು ಯೋಗದಿಂದ ಮಾತ್ರ ಸಾಧ್ಯ ಎಂದು ಹಿರಿಯ ಪತ್ರಕರ್ತ ಬಿ.ಜಿ.ಅನಂತಶಯನ ಅಭಿಪ್ರಾಯಪಟ್ಟಿದ್ದಾರೆ.

ವಾಂಡರರ್ಸ್ ಸ್ಪೋರ್ಟ್ಸ್   ಕ್ಲಬ್ ಹಾಗೂ ಮ್ಯಾನ್ಸ್ ಅಕಾಡಮಿ ಇದರ ಸಂಯುಕ್ತಾಶ್ರಯದಲ್ಲಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 26ನೇ ವರ್ಷದ ದಿ.ಶಂಕರ್ ಸ್ವಾಮಿ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು   ಮಾತನಾಡಿದರು. ನಮ್ಮ ಕಣ್ಣಿಗೆ ಕಾಣದ ಒಂದು ಅದ್ಭುತ ಶಕ್ತಿ ಇದೆ, ಅದು ನಮ್ಮೆಲ್ಲರ ಮನಸ್ಸಿನಲ್ಲಿದೆ. ಯೋಗ ಮತ್ತು ಪ್ರಾಣಾಯಾಮದಿಂದ ಮನಸ್ಸು ಸ್ಥಿರವಾಗಿ  ಆತ್ಮಸ್ಥೈರ್ಯ ಹೆಚ್ಚಾಗುತ್ತದೆ ಎಂದರು.

ಆತ್ಮವಿಶ್ವಾಸ ಇದ್ದಲ್ಲಿ ಜೀವನದಲ್ಲಿ ಎಲ್ಲವನ್ನು ಪಡೆಯಬಹುದು, ಇಂದಿನ ಯಾಂತ್ರೀಕೃತ ಕಂಪ್ಯೂಟರ್ ಯುಗದಲ್ಲಿ ಮಾನವ ತನ್ನನ್ನು ತಾನು ಮರೆತು ಬಿಡುತ್ತಿದ್ದಾನೆ. ನಾನು ಯಾರು ಎಂದು ಒಳಕಣ್ಣು ತೆರೆದು ನೋಡಿ ಜೀವನವನ್ನು ರೂಪಿಸಿಕೊಳ್ಳಿ ಎಂದರು. ಪತ್ರಿಯೊಬ್ಬರು ಶಿಬಿರದ ಲಾಭ ಪಡೆದುಕೊಳ್ಳುವಂತೆ ಅನಂತಶಯನ ಕರೆ ನೀಡಿದರು

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಂತರರಾಷ್ಟ್ರೀಯ ಹಿರಿಯ ಆಟಗಾರ ಎಂ.ಎಸ್.ಮೊಣ್ಣಪ್ಪ, ನನ್ನ ಈ ಸಾಧನೆಗೆ ದಿ. ಶಂಕರ್ ಸ್ವಾಮಿಯೇ ಕಾರಣ, ಅವರು ಕಲಿಸಿದ ಶಿಸ್ತಿನಿಂದ ಒಳ್ಳೆಯ ಕ್ರೀಡಾಪಟು ಆಗಿರುವುದಾಗಿ ನೆನಪಿಸಿಕೊಂಡರು. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗುವಂತೆ ಶಿಬಿರಾರ್ಥಿಗಳಿಗೆ ಕರೆ ನೀಡಿದರು.

ಹಿರಿಯ ಹಾಕಿ ಆಟಗಾರ ಕುಂಜಿಲ ಗ್ರಾಮದ ಕೋಟೇರ ಮುದ್ದಯ್ಯ, ಶ್ಯಾಂ ಪೂಣಚ್ಚ, ಶಾಂತಿ ಶಂಕರ್, ಗಣೇಶ್, ಅಶೋಕ್ ಅಯ್ಯಪ್ಪ, ಆಸಿಪ್, ವೆಂಕಟೇಶ್, ಲಕ್ಷ್ಮಣ್ ಸಿಂಗ್ ಹಾಗೂ ಶಿಬಿರದ ಸಂಘಟಕರಾದ ಬಾಬು ಸೋಮಯ್ಯ ಉಪಸ್ಥಿತರಿದ್ದರು.

ರಚನ ಮತ್ತು ತಂಡದವರು ಪ್ರಾರ್ಥಿಸಿದರು, ಯೋಗ ಶಿಕ್ಷಕ ಎಸ್.ಟಿ. ವೆಂಕೇಶ್ ಸ್ವಾಗತಿಸಿದರು, ಶ್ಯಾಂ ಪೂಣಚ್ಚ ವಂದಿಸಿದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: