ಪ್ರಮುಖ ಸುದ್ದಿ

ಮತ ಚಲಾಯಿಸದೇ ಪ್ರವಾಸಕ್ಕೆ ಬರುತ್ತಿರುವವರಾದರೆ ಅವರಿಗೆ ವಸತಿಗೃಹದಲ್ಲಿ ತಂಗಲು ಅವಕಾಶ ನೀಡಬೇಡಿ : ಶಿವಮೊಗ್ಗ ಜಿಲ್ಲಾಧಿಕಾರಿಗಳಿಂದ ನಿರ್ದೇಶನ

ರಾಜ್ಯ(ಶಿವಮೊಗ್ಗ),ಏ.2:- ಲೋಕಸಭಾ ಚುನಾವಣೆಯು ಏ.18 ಮತ್ತು 23ರಂದು ನಡೆಯಲಿದ್ದು, ಚುನಾವಣೆ ಸಂದರ್ಭದಲ್ಲಿ ಕೊಠಡಿಗಳನ್ನು ಕಾಯ್ದಿರಿಸುವ ಮುನ್ನ ಅವರು ಮತ ಚಲಾಯಿಸದೇ ಪ್ರವಾಸಕ್ಕೆ ಬರುತ್ತಿರುವವರಾದರೆ ಅವರಿಗೆ ವಸತಿಗೃಹದಲ್ಲಿ ತಂಗಲು ಅವಕಾಶ ನೀಡಬೇಡಿ ಎಂದು ವಸತಿಗೃಹದ ಮಾಲೀಕರು ಮತ್ತು ವ್ಯವಸ್ಥಾಪಕರಿಗೆ ಶಿವಮೊಗ್ಗ  ಜಿಲ್ಲಾಧಿಕಾರಿಗಳು   ನಿರ್ದೇಶಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಲೋಕಸಭಾ ಸಾರ್ವತ್ರಿಕ ಚುನಾವಣೆಯು ಕರ್ನಾಟಕದಲ್ಲಿ ಏ.18ರಂದು 14ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಹಾಗೂ ಏ.23ರಂದು 14ಜಿಲ್ಲೆಗಳಲ್ಲಿ 2ನೇ ಹಂತದಲ್ಲಿ ನಡೆಯಲಿದೆ. ಈ ದಿನಾಂಕಗಳಂದು ಮತದಾನ ಮಾಡಲು ಸಾರ್ವತ್ರಿಕ ರಜೆ ಘೋಷಣೆಯಾಗಿದೆ. ಮತದಾರರು ಮತದಾನ ಮಾಡದೇ ಪ್ರವಾಸ ಕೈಗೊಳ್ಳುತ್ತಿರುವುದು ಕಂಡು ಬರುತ್ತಿದ್ದು, ಶೇಖಡಾವಾರು ಮತದಾನ ಕಡಿಮೆಯಾಗುತ್ತಿದೆ. ಆದ್ದರಿಂದ ಕೊಠಡಿಕೋರಿ ಬರುವ ಪ್ರವಾಸಿಗರಿಗೆ ಹಾಗೂ ಇತರೇ ಕೊಠಡಿಯನ್ನು ಕಾಯ್ದಿರಿಸುವ ಮೊದಲು ಅವರ ಎಪಿಕ್ ಹಾಗೂ ವಿಳಾಸವನ್ನು ಪರಿಶೀಲಿಸಿ ಅವರು ಈ ದಿನಾಂಕಗಳಂದು ನಡೆಯುವ ಚುನಾವಣಾ ಕ್ಷೇತ್ರಗಳ ಮತದಾರರಾಗಿದ್ದರೆ ಅಂತಹವರುಗಳಿಗೆ ಯಾವುದೇ ರೀತಿಯ ಕೊಠಡಿಗಳನ್ನು ಕಾಯ್ದಿರಿಸದೇ ಪ್ರಜಾಪ್ರಭುತ್ವದ ಹಬ್ಬವಾದ 2019-ಲೋಕಸಭಾ ಚುನಾವಣೆಯ ಮತದಾನದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುವಂತೆ ತಮ್ಮಲ್ಲಿ ನೋಂದಣಿಯಾಗಿರುವ ಹೋಟೆಲ್/ರೆಸಾರ್ಟ್/ಹೋಸ್ಟೇಗಳು/ವಸತಿಗೃಹಗಳ ಮಾಲೀಕರಿಗೆ ನಿರ್ದೇಶನ ನೀಡಿ ಎಂದಿದ್ದಾರೆ.

ಚುನಾವಣೆ ನಡೆಯುವ ದಿನಾಂಕಗಳಂದು ಎಲ್ಲಾ ಕೈಗಾರಿಕೆ ಹಾಗೂ ಖಾಸಗಿ ಕಂಪೆನಿ/ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಮತದಾನದಲ್ಲಿ ಭಾಗವಹಿಸುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಅವರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: