ಕರ್ನಾಟಕಮೈಸೂರು

‘ಪರಿಶುದ್ಧ ಆಹಾರ ಪ್ರತಿಯೊಬ್ಬರ ಹಕ್ಕು’ ಘೋಷಣೆಯೊಂದಿಗೆ ದಸರಾ ಆಹಾರಮೇಳದಲ್ಲಿ ಅ.1 ರಿಂದ ಅ. 9 ರವರೆಗೆ ಸಿರಿಧಾನ್ಯ ಮೇಳ

ವಿಶ್ವವಿಖ್ಯಾತ ಮೈಸೂರು ದಸರಾದ ಆಹಾರ ಮೇಳದಲ್ಲಿ “ಪರಿಶುದ್ಧ ಆಹಾರ ಪ್ರತಿಯೊಬ್ಬರ ಹಕ್ಕು” ಘೋಷಣೆಯೊಂದಿಗೆ ಸಿರಿಧಾನ್ಯ ಮೇಳವನ್ನು ಆಯೋಜಿಸಿಲಾಗಿದೆ. ಈ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಸಿರಿಧಾನ್ಯಗಳ ಪ್ರಾತ್ಯಕ್ಷಿಕೆ, ಅಡುಗೆ ಕ್ವಿಜ್ ಹಾಗೂ ಸವಿಭೋಜನದಂತಹ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿಲಾಗಿದೆ ಎಂದು ಆಹಾರ ಇಲಾಖೆಯ ಉಪನಿರ್ದೇಶಕ ಕಾ.ರಾಮೇಶ್ವರಪ್ಪ ತಿಳಿಸಿದರು.

ಅವರು ಸೆ. 21, ಬುಧವಾರದಂದು ಜಿಲ್ಲಾ ವಾರ್ತಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಕ್ಟೋಬರ್ 1 ರಿಂದ 9ರ ವರೆಗೆ ನಗರದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಆವರಣದಲ್ಲಿ ನಡೆಯಲಿರುವ ಸಿರಿಧಾನ್ಯ ಮೇಳದಲ್ಲಿ ಸಹಜ ಸಮೃದ್ಧ ಸಾವಯುವ ಕೃಷಿಕರ ಬಳಗದ ಸಹಭಾಗಿತ್ವದಲ್ಲಿ ‘ಸಿರಿಧಾನ್ಯ ಲೋಕ’ವನ್ನು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1:30ರ ವರೆಗೆ ಆಯೋಜಿಸಿದ್ದು, ರಾಜ್ಯದ ಇತರೆ ಜಿಲ್ಲೆಯ ರೈತರು ಪಾಲ್ಗೊತ್ತಿದ್ದಾರೆ. ಪ್ರತಿ ದಿನ ಒಂದೊಂದು ಧಾನ್ಯದ ಪ್ರಾತ್ಯಕ್ಷಿಕೆ ಹಾಗೂ ಅಡುಗೆ ತಯಾರಿಸಿ ‘ಸಿರಿಧಾನ್ಯ’ ಊಟ ಉಣಬಡಿಸಲಾಗುವುದು.

“ಸಿರಿಧಾನ್ಯ ಆಹಾರ”

ಮೇಳದಲ್ಲಿ ವಿವಿಧ ಬಗೆಯ ಸಿರಿಧಾನ್ಯ ಆಹಾರ ಖಾದ್ಯಗಳನ್ನು ಮೈಸೂರಿಗರಿಗೆ ಉಣಬಡಿಸಲು ರಾಜ್ಯದ ಹಲವಾರು ಕೃಷಿಕರು ಸಿದ್ಧತೆ ನಡೆಸಿದ್ದು, ಅದರಂತೆ ಅಕ್ಟೋಬರ್ 2ರಂದು ಮಂಡ್ಯದ ಬಯಲುಸೀಮೆ ಬೆಳೆಗಾರರ ಸಂಘ ಹಾಗೂ ಕೊಪ್ಪಳದ ಸಾವಯವ ಕೃಷಿಕರ ಬಳಗ ‘ರಾಗಿ ಮತ್ತು ಸಜ್ಜೆ’, ಅ. 3 – ಗೋಪಾಲನಹಳ್ಳಿ, ಹಾರಕ ಬೆಳೆಗಾರರ ಸಂಘದಿಂದ ‘ಹಾರಕ’ದ,  ಅ.4ರಂದು ಬಿಜಾಪುರದ ಕೃಷಿಕರ ಬಳಗದಿಂದ ‘ಜೋಳ’, ಅ.5 – ನವಣೆ ಬಗ್ಗೆ ಹಾವೇರಿಯ ಮಹಿಳಾ ಸಂಘ, ಅ.6 ಕುಂದುಗೋಳದ ಸಂಜೀವಿನಿ ಸಾವಯುವ ಕೃಷಿಕರ ಬಳಗದಿಂದ ‘ಸಾವೆ’ ಅ.7 – ಕುಂದುಗೋಳದ ಸಂಜೀವಿನಿ ಸಾವಯುವ ಕೃಷಿಕರ ಬಳಗದಿಂದ ಬರಗು.  ಅ.8- ಮಧುಗಿರಿಯ ಕೊರಲೆ ಬೆಳೆಗಾರರ ಸಂಘದಿಂದ ಕೊರಲೆ ಬಗ್ಗೆ ಮತ್ತು ಅ.8ರಂದು ಹೊನ್ನೇರು ಬಳಗದಿಂದ ‘ಊದಲು’ – ಹೀಗೆ ಸಿರಿಧಾನ್ಯಗಳ ತಿನಿಸುಗಳು ಆಹಾರ ಮೇಳದಲ್ಲಿ ಲಭ್ಯವಾಗಲಿವೆ.

ಸಾವಯುವ ಮತ್ತು ನೈಸರ್ಗಿಕ ಕೃಷಿಯಲ್ಲಿ ಬೆಳೆದ ಹಣ್ಣು, ತರಕಾರಿ, ಸೊಪ್ಪು ಮತ್ತು ಕಾಳುಗಳ ‘ತೋಟದಿಂದ ತಟ್ಟೆಗೆ’ ಎನ್ನುವ ವಿಶೇಷ ಪ್ರಾತ್ಯಕ್ಷಿಕೆಯನ್ನು ನೇಸರ ಆರ್ಗ್ಯಾನಿಕ್ ಫಾರಂ ಸಂಸ್ಥೆ ನಡೆಸುವುದು. ಇದೇ ವೇಳೆ ನುರಿತ ತಜ್ಞರಿಂದ ಚರ್ಚೆ, ರೈತರೊಂದಿಗೆ ಸಮಾಲೋಚನೆ, ಬೀಜಗಳ ಮಾರಾಟ, ವಿಚಾರಗೋಷ್ಟಿ, ಕ್ವಿಜ್ ಗುರುತಿಸಿ ಅಡುಗೆ ತಯಾರಿಸುವ ಸ್ಪರ್ಧೆಗಳು ಜರುಗುವುವು. ಚಲನಚಿತ್ರ ನಟ ಕಿಶೋರ್ ಸಿರಿಧಾನ್ಯಗಳ ರಾಯಭಾರಿಯಾಗಿದ್ದು ಮುಂದಿನ ದಿನಗಳಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಸಾವಯುವ ಕೃಷಿ ಕೃಷ್ಣಪ್ರಸಾದ್ ಮಾತನಾಡಿ, ಆಧುನಿಕತೆಯ ಬೆಡಗಿನಲ್ಲಿ ಜನ ಸಿದ್ಧ ಆಹಾರಗಳಿಗೆ ಮಾರು ಹೋಗಿದ್ದು ಪೋಷಕಾಂಶದ ಕೊರತೆಯಿಂದಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಮರಣಾಂತಿಕ ಕಾಯಿಲೆಗಳು ಆವರಿಸಿವೆ. ಇಂದು ನೇಪಥ್ಯಕ್ಕೆ ಸರಿದಿರುವ ಸಿರಿಧಾನ್ಯಗಳ ಸ್ವರ್ಗವೆಂದೆ ಹಳೆ ಮೈಸೂರು ಪ್ರದೇಶವನ್ನು ಗುರುತಿಸಲಾಗಿತ್ತು. ಈ ಭಾಗದ ಪಾರಂಪರಿಕ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಆರೋಗ್ಯಪೂರ್ಣ ಜೀವನ ನಡೆಸಬಹುದು. ಇವುಗಳು ಒಣಭೂಮಿಯಲ್ಲಿಯೂ ಅಧಿಕ ಇಳುವರಿ ನೀಡುವ ಬೆಳೆಯಾಗಿದ್ದು, ರೈತರಿಗೆ ಲಾಭವನ್ನು ತರಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಭೂಮಾಪನ ಅಧಿಕಾರಿ ಸರಳ ನಾಯರ್, ನೇಸರ ಆರ್ಗ್ಯಾನಿಕ್ ಫಾರಂ ಸಂಸ್ಥೆಯ ಬಾಲಚಂದ್ರ ಹಾಗೂ ಅಕ್ಷರ ದಾಸೋಹ ಅಧಿಕಾರಿ ಡಿ.ಉದಯಕುಮಾರ್ ಹಾಜರಿದ್ದರು.

ಸಿರಿಧಾನ್ಯ ಮೇಳದ ಸುದ್ದಿಗೋಷ್ಟಿಯಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕ ಕಾ. ರಾಮೇಶ್ವರಪ್ಪ. ಭೂಮಾಪನ ಅಧಿಕಾರಿ ಸರಳ ನಾಯರ್, ನೇಸರ ಆರ್ಗ್ಯಾನಿಕ್ ಫಾರಂ ಸಂಸ್ಥೆಯ ಬಾಲಚಂದ್ರ ಮತ್ತು ಅಕ್ಷರ ದಾಸೋಹ ಅಧಿಕಾರಿ ಡಿ. ಉದಯಕುಮಾರ್ ಹಾಜರಿದ್ದರು.
ಸಿರಿಧಾನ್ಯ ಮೇಳದ ಸುದ್ದಿಗೋಷ್ಟಿಯಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕ ಕಾ. ರಾಮೇಶ್ವರಪ್ಪ. ಭೂಮಾಪನ ಅಧಿಕಾರಿ ಸರಳ ನಾಯರ್, ನೇಸರ ಆರ್ಗ್ಯಾನಿಕ್ ಫಾರಂ ಸಂಸ್ಥೆಯ ಬಾಲಚಂದ್ರ ಮತ್ತು ಅಕ್ಷರ ದಾಸೋಹ ಅಧಿಕಾರಿ ಡಿ. ಉದಯಕುಮಾರ್ ಹಾಜರಿದ್ದರು.

Leave a Reply

comments

Related Articles

error: