ಮೈಸೂರು

ಯುವ ಮತದಾರರನ್ನು ಸೆಳೆಯಲು ಸೆಲ್ಫಿಜೋನ್ :ಸಿಇಒ  ಕೆ.ಜ್ಯೋತಿ

ಮೈಸೂರು,ಏ.3:- ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲು ಮೈಸೂರು ಮೃಗಾಲಯದಲ್ಲಿ ವಿವಿಧ ಪ್ರಾಣಿಗಳ ಮಾಡೆಲ್‍ಗಳನ್ನು ರಚಿಸಿ “ಸೆಲ್ಫಿಜೋನ್” ನಿರ್ಮಿಸಲಾಗುತ್ತಿದೆ ಹಾಗೂ ಕಡ್ಡಾಯ ಮತದಾನದ ಬಗ್ಗೆ ಪೋಸ್ಟರ್‍ಗಳನ್ನು ಹಾಕಲಾಗುತ್ತಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ   ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ   ಮಾತನಾಡಿದ ಅವರು ಚುನಾವಣಾ ಆಯೋಗದ ಸೂಚನೆಯಂತೆ ಶಾಲಾ ಕಾಲೇಜುಗಳಲ್ಲಿ 1145 “ಮತದಾರರ ಸಾಕ್ಷರತಾ ಕ್ಲಬ್” ಗಳನ್ನು ರಚಿಸಲಾಗಿದೆ. ಪ್ರತಿ ಶನಿವಾರ ಶಾಲಾ ವಿದ್ಯಾರ್ಥಿಗಳಿಂದ ಮತದಾನದ ಜಾಗೃತಿ ಮೂಡಿಸುವ ಜಾಥಾ ನಡೆಸಲಾಗುತ್ತಿದೆ ಹಾಗೂ ಅವುಗಳ ಮೂಲಕ ಯುವ ಮತದಾರರಲ್ಲಿ ಹಾಗೂ ಅವರ ಪೋಷಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಕ್ರಮವಹಿಸಲಾಗಿದೆ ಎಂದರು.

ಮೈಸೂರು ಜಿಲ್ಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 2ರಂತೆ ಒಟ್ಟು 24 ಮತಗಟ್ಟೆಗಳಿದ್ದು, ಅವುಗಳಿಗೆ ‘ಸಖಿ’ ಮತಗಟ್ಟೆಗಳೆಂದು ಹೆಸರಿಸಲಾಗಿದೆ ಎಂದರು.

ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ಮತದಾನ ಕೇಂದ್ರಗಳನ್ನು ಮತದಾರ ಸ್ನೇಹಿಯಾಗಿಸಲು ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು,  ವಿದ್ಯುತ್ ಸೌಲಭ್ಯ, ಅಂಗವಿಕಲರಿಗೆ ಮತ್ತು ವಯೋವೃದ್ಧರಿಗೆ ಅನುಕೂಲವಾಗುವಂತೆ ರ್ಯಾಂಪ್,  ಶೌಚಾಲಯ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಏಪ್ರಿಲ್ 3 ರಿಂದ ಚಾಮುಂಡಿ ಬೆಟ್ಟದ ಮೇಲೆ “ನಿಮ್ಮ ಮತ ನಿಮ್ಮ ಹಕ್ಕು” ಎಂದು ವಿದ್ಯುತ್ ದೀಪಾಲಂಕಾರದಲ್ಲಿ ಮತದಾನದ ಜಾಗೃತಿ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಬಸ್ ಟಿಕೇಟ್, ಹಾಲಿನ ಪ್ಯಾಕೇಟ್ ಮತ್ತು ವೈದ್ಯರು ನೀಡುವ ಔಷಧಿ ಚೀಟಿಯ ಮೇಲೆ “ನಿಮ್ಮ ಮತ ನಿಮ್ಮ ಹಕ್ಕು”ಎಂದು ಮತದಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ವಾರ್ತಾ ಇಲಾಖೆಯ ಒಂದು ವಿಶೇಷ ವಾಹನದಲ್ಲಿ ನೈತಿಕ ಮತ್ತು ಕಡ್ಡಾಯ ಮತದಾನದ ಬಗ್ಗೆ ಟ್ಯಾಬ್ಲೋ ಸಿದ್ಧಪಡಿಸಿ ಜಿಲ್ಲೆಯ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸಂಚರಿಸಿ ಅರಿವು ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಇದೇ ವೇಳೆ ಅರಿವು ಮೂಡಿಸುವ ವಾಹನಕ್ಕೆ ಜಿಲ್ಲಾ ಸ್ವೀಪ್ ರಾಯಭಾರಿ ಗಾಯಕ ಶ್ರೀಹರ್ಷ ಚಾಲನೆ ನೀಡಿದರು.

ಈ ಸಂದರ್ಭ ಜಿಲ್ಲಾ ಸ್ವೀಪ್ ಕಾರ್ಯದರ್ಶಿ ಕೃಷ್ಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ರಾಜು.ಆರ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: