ಮೈಸೂರು

ನಮ್ಮ ಕಷ್ಟಕ್ಕೆ ಸ್ಪಂದಿಸದ ನಿಮಗೆ ಏಕೆ ಮತ ಹಾಕಬೇಕು? ಶಾಸಕ ಅನಿಲ್ ಚಿಕ್ಕಮಾದು ಬೆವರಿಳಿಸಿದ ಹಿರೇಹಳ್ಳಿ ಗ್ರಾಮಸ್ಥರು

ಮೈಸೂರು,ಏ.4:- ನಮ್ಮ ಕಷ್ಟಕ್ಕೆ ಸ್ಪಂದಿಸದ ನಿಮಗೆ ಏಕೆ ಮತ ಹಾಕಬೇಕು? ಎಂದು ಶಾಸಕರಿಗೆ ಗ್ರಾಮಸ್ಥರು ಬೆವರಿಳಿಸಿದ ಘಟನೆ ಹೆಚ್.ಡಿ ಕೋಟೆ ತಾಲ್ಲೂಕಿನ ಹಿರೇಹಳ್ಳಿಯಲ್ಲಿ ನಡೆದಿದ್ದು, ಕಾಂಗ್ರೆಸ್ ಮುಖಂಡರು ಜನರ ಸಿಟ್ಟಿಗೆ ತಬ್ಬಿಬ್ಬಾಗಿದ್ದಾರೆ.

ಜನಪ್ರತಿನಿಧಿಗಳು ಕಾರು ಹತ್ತುವವರೆಗೂ ಬಿಡದೆ ಗ್ರಾಮಸ್ಥರು ಮೋದಿ ಪರ ಘೋಷಣೆ ಕೂಗಿದ್ದು, ಹೆಚ್.ಡಿ ಕೋಟೆ ತಾಲೂಕು ಶಾಸಕ ಅನಿಲ್ ಚಿಕ್ಕಮಾದುಗೆ ಗ್ರಾಮಸ್ಥರು ಘೇರಾವ್‌ ಹಾಕಿದ್ದಾರೆ. ಚಾಮರಾಜನಗರ ಲೋಕಸಭಾ ಕೈ ಅಭ್ಯರ್ಥಿ ಧ್ರುವ ನಾರಾಯಣ್ ಪರವಾಗಿ ಚುನಾವಣಾ ಪ್ರಚಾರಕ್ಕೆ ಅವಕಾಶ  ಕೊಡದೆ ಬಿಜೆಪಿಗೆ ಜೈಕಾರ ಕೂಗಿ  ಶಾಸಕ ಅನಿಲ್ ಚಿಕ್ಕಮಾದು ಅವರನ್ನು ವಾಪಸ್‌ ಕಳುಹಿಸಿದ್ದಾರೆ ಎನ್ನಲಾಗಿದೆ. ಗ್ರಾಮದ ಪ್ರವೇಶ ಭಾಗದಲ್ಲಿ ಶಾಸಕ ಅನಿಲ್ ಚಿಕ್ಕಮಾದುರನ್ನು   ಗ್ರಾಮಸ್ಥರು ತಡೆದಿದ್ದು, ಚುನಾವಣೆಗಳಲ್ಲಿ ಗೆಲವು ಸಾಧಿಸಿದ್ದೀರಿ, ಏನು ಅಭಿವೃದ್ಧಿ ಮಾಡಿಲ್ಲ, ಯಾಕೆ ಬಂದಿದ್ದೀರಿ ? ಕಾಂಗ್ರೆಸ್ ಪಕ್ಷದ ಸಂಸದ, ಶಾಸಕರಿದ್ದು, ಗ್ರಾಮದಲ್ಲಿ ಏನು ಅಭಿವೃದ್ಧಿ ಕೆಲಸ ಮಾಡಿದ್ದೀರಾ?  ಕಳೆದ ಎಳು ವರ್ಷಗಳಿಂದ ಕೋಟೆಯಿಂದ ತಾರಕ ಸಂಪರ್ಕದ ಮುಖ್ಯ ರಸ್ತೆ ಹದಗೆಟ್ಟಿದೆ ಎಂದು ತರಾಟೆಗೆ ತೆಗೆದುಕೊಂಡರು.

ಗ್ರಾಮದಲ್ಲಿ ಕುಡಿಯುವ ನೀರಿಲ್ಲ. ಒಳ ಚರಂಡಿ, ರಸ್ತೆ ಸೌಲಭ್ಯವಿಲ್ಲ. ವಾಸಕ್ಕೆ ಸರಿಯಾದ ಮನೆಯಿಲ್ಲ. ಹಿಂದಿನ ಚುನಾವಣೆ ವೇಳೆ ಗ್ರಾಮಕ್ಕೆ ಬಂದಿದ್ದ ನೀವು ನಂತರ ಇತ್ತ ತಲೆ ಹಾಕಿಲ್ಲ ಎಂದು ಹರಿಹಾಯ್ದರು.  ಮೋದಿ ಪರವಾಗಿ ಜೈಕಾರ ಕೂಗಿ ಅನಿಲ್ ಕುಮಾರ್ ಅವರಿಗೆ ಧಿಕ್ಕಾರ ಕೂಗಿದರು. ನಿಮ್ಮನ್ನು ಕ್ಷೇತ್ರದ ಶಾಸಕರಾಗಿ ಆಯ್ಕೆ ಮಾಡಿದ್ದೇವೆ.  ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಪ್ತರಿಗೆ ಸವಲತ್ತು ಕಲ್ಪಿಸಿದ್ದೀರಿ. ನಾವು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದೇವೆ. ಕೂಲಿ ಮಾಡಿ ಬದುಕು ಸಾಗಿಸುತ್ತಿದ್ದೇವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಬೆಂಬಲಿಗರೊಂದಿಗೆ   ಶಾಸಕ ಅನಿಲ್ ಚಿಕ್ಕಮಾದು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಿಯಾರ ಸೋಮೇಶ್, ಎಚ್.ಡಿ ಕೋಟೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಜಾಜ್ ಪಾಷಾಗೂ ಮುಖ ಭಂಗವಾಗಿದೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: