ದೇಶ

ವಾಯುಮಾಲಿನ್ಯ: 2017ರಲ್ಲಿ ಭಾರತದಲ್ಲಿ 12 ಲಕ್ಷ ಮಂದಿ ಬಲಿ

ನವದೆಹಲಿ,ಏ.4-ಹೆಚ್ಚುತ್ತಿರುವ ವಾಯುಮಾಲಿನ್ಯದಿಂದಾಗಿ 2017ರಲ್ಲಿ ಭಾರತದಲ್ಲಿ 12 ಲಕ್ಷ ಮಂದಿ ಮೃತಪಟ್ಟಿದ್ದಾರೆ.

2017ರಲ್ಲಿ ವಾಯು ಮಾಲಿನ್ಯದ ಪರಿಣಾಮ ಪಾರ್ಶ್ವವಾಯು, ಡಯಾಬಿಟಿಸ್, ಹೃದಯಾಘಾತ, ಶ್ವಾಸಕೋಶ ಕ್ಯಾನ್ಸರ್ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ವಿಶ್ವಾದ್ಯಂತ 50 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ.

ಅಮೆರಿಕಾ ಮೂಲದ ಹೆಲ್ತ್‌ ಎಫೆಕ್ಟ್ಸ್ ಇನ್ಸ್ಟಿಟ್ಯೂಟ್‌ ಎಂಬ ಸಂಸ್ಥೆಯು ಈ ವರದಿಯನ್ನು ತಯಾರಿಸಿದ್ದು ಇದರ ಫ‌ಲಿತಾಂಶಗಳನ್ನು ಬುಧವಾರದಂದು ಈ ಸಂಸ್ಥೆ ಬಿಡುಗಡೆಗೊಳಿಸಿದೆ. ವಾಯುಮಾಲಿನ್ಯದಿಂದಾಗಿ ಹೆಚ್ಚು ಮಂದಿ ಸಾವನ್ನಪ್ಪುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.

ಈ ವರದಿಯಲ್ಲಿ ಉಲ್ಲೇಖವಾಗಿರುವಂತೆ ಒಟ್ಟು 5 ಮಿಲಿಯನ್‌ ಸಾವುಗಳಲ್ಲಿ 3 ಮಿಲಿಯನ್‌ ಸಾವು ನೇರವಾಗಿ ಪಿ.ಎಂ.2.5 ಕಾರಣದಿಂದಲೇ ಸಂಭವಿಸಿದ್ದು, ಇವುಗಳಲ್ಲಿ ಅರ್ಧದಷ್ಟು ಸಾವುಗಳು ಭಾರತ ಮತ್ತು ಚೀನಾದಲ್ಲಿ ಸಂಭವಿಸಿದೆ ಮಾತ್ರವಲ್ಲದೇ ವಿಶ್ವದಲ್ಲಿ ನೇರ ವಾಯುಮಾಲಿನ್ಯದಿಂದ ಸಂಭವಿಸುತ್ತಿರುವ ಸಾವುಗಳಲ್ಲಿ ಅರ್ಧದಷ್ಟು ಸಾವುಗಳಿಗೆ ಭಾರತ ಮತ್ತು ಚೀನಾದಲ್ಲಿ ಉಂಟಾಗುತ್ತಿರುವ ವಾಯುಮಾಲಿನ್ಯವೇ ನೇರ ಕಾರಣವಾಗಿದೆ.

ಈ ವರದಿಯಲ್ಲಿ ಬಹಿರಂಗವಾಗಿರುವ ಇನ್ನೊಂದು ಕಳವಳಕಾರಿ ಅಂಶವೆಂದರೆ, ದಕ್ಷಿಣ ಏಷ್ಯಾದಲ್ಲಿ ಜನಿಸುವ ಮಗುವಿನ ಆಯಸ್ಸು ಎರಡು ವರ್ಷ ಆರು ತಿಂಗಳು ಕಡಿಮೆಯಾಗುತ್ತಿದೆ ಮತ್ತಿದಕ್ಕೆ ಈ ಭಾಗಗಳಲ್ಲಿ ದಿನೇ ದಿನೇ ವಿಕೋಪಕ್ಕೆ ಹೋಗುತ್ತಿರುವ ವಾಯುಮಾಲಿನ್ಯವೇ ಕಾರಣವಾಗಿದೆ. ಅದೇ ರೀತಿ ಜಾಗತಿಕ ಜೀವಿತಾವಧಿ 20 ತಿಂಗಳುಗಳಷ್ಟು ಕಡಿಮೆಗೊಳ್ಳುತ್ತಿದೆ. ವಿಶ್ವಾದ್ಯಂತ ರಸ್ತೆ ಅಪಘಾತ ಅಥವಾ ಮಲೇರಿಯಾ ಕಾರಣಗಳಿಂದ ಉಂಟಾಗುತ್ತಿರುವ ಒಟ್ಟು ಸಾವಿನ ಸಂಖ್ಯೆಗಿಂತ ವಾಯುಮಾಲಿನ್ಯ ಸಂಬಂಧಿತ ಕಾಯಿಲೆಗಳಿಂದ ಸಾಯುವವರ ಸಂಖ್ಯೆ ಹೆಚ್ಚು ಎಂಬ ಅಂಶವನ್ನು ಈ ವರದಿ ಹೊರಹಾಕಿದೆ. (ಎಂ.ಎನ್)

Leave a Reply

comments

Related Articles

error: