ಮೈಸೂರು

ತಮಿಳು, ತೆಲುಗು ಮತ್ತು ಮರಾಠಿಗರಿಗೆ ಇರುವ ಇಚ್ಛಾಶಕ್ತಿ ಕನ್ನಡಿಗರಿಗಿಲ್ಲ : ಡಾ.ಪಿ.ಕೆ.ರಾಜಶೇಖರ್ ಬೇಸರ

ತಮಿಳು, ಮರಾಠಿಗರು, ತೆಲುಗರಂತೆ ನಮ್ಮ ಕನ್ನಡಿಗರಲ್ಲಿ ಭಾಷೆಯ ಬಗ್ಗೆ ಒಲವು ಇಚ್ಛಾ ಶಕ್ತಿಯಿಲ್ಲವೆಂದು ಜಾನಪದ ವಿದ್ವಾಂಸ ಹಾಗೂ ಸಾಹಿತಿ ಡಾ.ಪಿ.ಕೆ.ರಾಜಶೇಖರ್ ಬೇಸರ ವ್ಯಕ್ತಪಡಿಸಿದರು.

ಭಾನುವಾರ ಪತ್ರಕರ್ತರ ಭವನದಲ್ಲಿ ಮೈಸೂರು ಕನ್ನಡ ವೇದಿಕೆಯ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಭಾರತದಲ್ಲಿ ಅನೇಕ ಭಾಷೆಗಳಿದ್ದರೂ ಕನ್ನಡದಲ್ಲಿ ಮಾತ್ರ ಅಂಕೆಗಳಿವೆ. ಇವುಗಳನ್ನು ಸಮರ್ಥವಾಗಿ ಬಳಸದೆ ಅಭಿವೃದ್ಧಿಗೊಳದೆ ಸುಂದರ ಭಾಷೆಯನ್ನು ಕಳೆದುಕೊಳ್ಳುವ ಅನುಭವ ಮೂಡುತ್ತಿದೆ. ಹಳ್ಳಿ ಮಕ್ಕಳನ್ನು ಅಮೆರಿಕಾಗೆ ಕಳಿಸುವ ಪೋಷಕರ ಕನಸು ಹಾಗೂ ದೂರಾಲೋಚನೆಯಿಂದಾಗಿ ಸಂಸ್ಕೃತಿ ಮತ್ತು ಭಾಷೆಯನ್ನು ನಿರ್ಲಕ್ಷಿಸಲಾಗಿರುವುದು ದುಖಃದಾಯಕ ಎಂದ ಅವರು, ಹೊರಗಿನವರಿಗೆ ಇಲ್ಲಿನ ನೆಲ, ಜಲ ಬೇಕು. ಭಾಷೆಯೇಕೆ ಬೇಡ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಕನ್ನಡದಲ್ಲಿ ವ್ಯವಹರಿಸಬೇಕು. ಬ್ಯಾಂಕ್ ಹಾಗೂ ಇತರೆ ವ್ಯವಹಾರಗಳಲ್ಲಿ ಅಂಕೆಗಳನ್ನು ಬಳಸಬೇಕು ಹಾಗೂ ಕೇಂದ್ರೀಯ ಪಠ್ಯಪುಸ್ತಕದಲ್ಲಿಯೂ ಕನ್ನಡವನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು. ನಮ್ಮತನ, ನೆಲ, ಜಲ ಸಂಸ್ಕೃತಿ ಉಳಿಸಿಕೊಳ್ಳುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ ಇಲ್ಲವೆಂದರೆ ತುಳಿದು ಹಾಕುವರು ಎನ್ನುವ ಎಚ್ಚರಿಕೆಯನ್ನು ನೀಡಿದರು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ವೇದಿಕೆಗಳು ಶ್ರಮಿಸಿ ಕನ್ನಡವನ್ನು ವಿಶ್ವದ ಶ್ರೀಮಂತ ಸಾಹಿತ್ಯವನ್ನಾಗಿಸಬೇಕೆಂದು ಆಶಿಸಿದರು.

ಹಿರಿಯ ಇತಿಹಾಸಕಾರ ಪ್ರೊ.ಪಿ.ವಿ.ನಂಜರಾಜೇ ಅರಸ್ ಅವರು ಮಾತನಾಡಿ, ಅವಕಾಶವಾದಿ ರಾಜಕಾರಣಿಗಳಿಂದ ಹಾಗೂ ರಾಜಕೀಯ ಪಕ್ಷಗಳಿಂದ ಕನ್ನಡದ ಅಭಿವೃದ್ಧಿ ಸಾಧ್ಯವಿಲ್ಲ. ಆದ್ದರಿಂದ ಕನ್ನಡದ ಹೋರಾಟಗಾರರು ಕಟ್ಟಿಬದ್ಧರಾಗಿ ಒಗ್ಗಟ್ಟಿನಿಂದ ಕನ್ನಡವನ್ನು ಉಳಿಸಿ ಬೆಳಸುವ ಕೆಲಸವನ್ನು ತುರ್ತಾಗಿ ಮಾಡಬೇಕಾಗಿದೆ ಎಂದ ಅವರು, ಕರ್ನಾಟಕ ಏಕೀಕರಣವಾಗಿ ಇಷ್ಟು ವರ್ಷವಾದರೂ ಕನ್ನಡವನ್ನು ಉಳಿಸಿ ಬೆಳಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರಪಟ್ಟರು. ಈ ನಿಟ್ಟಿನಲ್ಲಿ ಮೈಸೂರು ಕನ್ನಡ ವೇದಿಕೆಯೂ ದಿನದರ್ಶಿಕೆ ಹಾಗೂ ವಾಹನಗಳಿಗೆ ಕನ್ನಡ ಅಂಕಿಗಳನ್ನು ಬಳಕೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಹಿರಿಯ ಸಾಹಿತಿ ಹಾಗೂ ಅಂಕಣಕಾರ ಬನ್ನೂರು ಕೆ.ರಾಜು ಅವರು ಮಾತನಾಡಿ, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ನಾಲಾಬೀದಿ ರವಿ ಹಾಗೂ ಕನ್ನಡ ಹೋರಾಟಗಾರರಾದ ಬೋಗಾದಿ ಸಿದ್ದೇಗೌಡ, ಮಹಾದೇವಸ್ವಾಮಿ, ರಾಧಾಕೃಷ್ಣ, ಎಳನೀರು ಕುಮಾರ್, ಪ್ಯಾಲೇಸ್ ಬಾಬು, ಮನುರಾಜ್, ಮೆಡಿಕಲ್ ಮಹೇಶ್ ಹಾಗೂ ಇತರರು ಈ ಸಂದರ್ಭಕ್ಕೆ ಸಾಕ್ಷಿಯಾದರು.

Leave a Reply

comments

Related Articles

error: