ಕರ್ನಾಟಕಪ್ರಮುಖ ಸುದ್ದಿ

ರಫೆಲ್ ಫೈಲು ಕಾಪಾಡಲಾರದವರು ದೇಶವನ್ನು ಹೇಗೆ ರಕ್ಷಿಸುತ್ತಾರೆ? ಎಚ್.ವಿಶ್ವನಾಥ್ ಪ್ರಶ್ನೆ

"ಹೊಗಳುವವರು ದೇಶಪ್ರೇಮಿಗಳು, ಪ್ರಶ್ನೆ ಮಾಡಿದವರು ದೇಶದ್ರೋಹಿಗಳು ಎಂಬಂತಾಗಿದೆ.."

ಬೆಂಗಳೂರು (ಏ.4): ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೀಡಿದ ಭರವಸೆಗಳನ್ನು ಈಡೇರಿಸಿರುವ ಬಗ್ಗೆ ಜನರ ಮುಂದೆ ಅನುಪಾಲನ ವರದಿ ಮಂಡಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.

ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಹಾಗೂ ಬೆಂಗಳೂರು ವರದಿಗಾರರ ಕೂಟ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ಏನಾಯಿತು? ಎಂದು ಪ್ರಶ್ನಿಸಿದರು.

ಕಳೆದ ಐದು ವರ್ಷಗಳಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ ಸರ್ಕಾರದ ಮಾಹಿತಿ ಪ್ರಕಾರ 27 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಬಿಎಸ್‍ಎನ್‍ಎಲ್‍ನಲ್ಲಿ 50 ಸಾವಿರ ಉದ್ಯೋಗ ಕಡಿತವಾಗಿದೆ. ಉದ್ಯೋಗ ಸೃಷ್ಟಿಸುವ ಬದಲು ಉದ್ಯೋಗವನ್ನೇ ಕಡಿತ ಮಾಡಲಾಗುತ್ತಿದೆ ಎಂದು ಟೀಕಿಸಿದರು. ಮಾತ್ರವಲ್ಲ , ಖಾಸಗಿ ಕಂಪನಿಯೊಂದಕ್ಕೆ ಪ್ರಧಾನಿ ರಾಯಭಾರಿಯಾಗಿರುವುದು ಹಿಂದೆಂದೂ ನಡೆದಿಲ್ಲ ಎಂದು ಅವರು ಆರೋಪಿಸಿದರು.

ಯೋಜನಾ ಆಯೋಗವನ್ನು ಮುಚ್ಚಿ ನೀತಿ ಆಯೋಗ ಮಾಡಲಾಗಿದೆ. ಬಾಂಗ್ಲಾದೇಶ ವಿಭಜನೆಯಾದಾಗ ಹಾಗೂ 2ನೇ ಮಹಾಯುದ್ಧದ ನಂತರವೂ ಹೆಚ್ಚು ಸೈನಿಕರು ಶರಣಾಗಿದ್ದರು. ಭಾರತಕ್ಕೆ ಯುದ್ಧ ಹೊಸದಲ್ಲ. ಆದರೆ ಪ್ರಧಾನಿ ನರೇಂದ್ರಮೋದಿ ಅವರು ಪಾಕಿಸ್ತಾನಕ್ಕೆ ಹೋಗಿ ಹೊಡೆದು ಬಂದಂತೆ ಹೇಳುತ್ತಾರೆ. ದೇಶದ ರಕ್ಷಣೆ ವಿಚಾರವನ್ನು ಏಕೆ ರಾಜಕೀಯಗೊಳಿಸಬೇಕು ಎಂದು ಪ್ರಶ್ನಿಸಿದರು.

ರಫೈಲ್ ಹಗರಣದ ದಾಖಲೆ ಕಳವಾಯಿತು ಎಂದರೆ ಬಿಜೆಪಿಯರು ಇನ್ಯಾವ ರೀತಿ ದೇಶ ರಕ್ಷಣೆ ಮಾಡುತ್ತಾರೆ ಎಂಬುದನ್ನು ಊಹಿಸಬಹುದು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜಾರಿಗೆ ತಂದಿದ್ದ ಜೀರೋ ಬ್ಯಾಲೆನ್ಸ್ ಖಾತೆಯನ್ನು ಜನಧನ್ ಆಗಿ ಮಾಡಲಾಗಿದೆ. ದೇಶದಲ್ಲಿ ಶೇ.75ರಷ್ಟು ಸಾಕ್ಷರತೆ ಇದ್ದು, ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದರು.

ಗ್ರಾಮಸಭೆಗಳಲ್ಲೂ ಹಿಂದಿನ ಸಭೆಯ ವರದಿ ಮಂಡಿಸುತ್ತಾರೆ. ಆದರೆ ಲೋಕಸಭೆಯಲ್ಲಿ ಈ ರೀತಿ ಪ್ರಶ್ನಿಸಿದರೆ ದೇಶದ್ರೋಹಿಗಳು ಎಂಬ ಪರಸ್ಥಿತಿ ತಂದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನಕಲಿ ರಾಷ್ಟ್ರೀಯವಾದಿಗಳು, ಭಾರತ ಪ್ರಭುತ್ವದ ಪರವಾದ ಹೋರಾಟ ಮಾಡುತ್ತಿರುವವರ ನಡುವಿನ ಸಂಘರ್ಷ ನಡೆಯುತ್ತಿದೆ. ಹೊಗಳುವವರು ದೇಶಪ್ರೇಮಿಗಳು, ಪ್ರಶ್ನೆ ಮಾಡಿದವರು ದೇಶದ್ರೋಹಿಗಳು ಎಂಬಂತಾಗಿದೆ ಎಂದು ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು. (ಎನ್.ಬಿ)

Leave a Reply

comments

Related Articles

error: