ಮೈಸೂರು

ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡುವತ್ತ ಗಮನಹರಿಸಬೇಕು :  ಡಾ. ಎಸ್. ಶ್ರೀಕಂಠಸ್ವಾಮಿ

ಮೈಸೂರು,ಏ.4:-  ಮೈಸೂರಿನ ಬಿ.ಎನ್ ರಸ್ತೆಯಲ್ಲಿರುವ ಜೆ ಎಸ್ ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಪದವಿ ಕಾಲೇಜಿನಲ್ಲಿಂದು  ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಸಮಾರೋಪ ಸಮಾರಂಭವು ನಡೆಯಿತು.

ಸಮಾರೋಪ ಭಾಷಣ ಮಾಡಿದ ಮೈಸೂರು ವಿಶ್ವವಿದ್ಯಾನಿಲಯದ, ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕರಾದ ಡಾ. ಎಸ್. ಶ್ರೀಕಂಠಸ್ವಾಮಿ  ಮಾತನಾಡಿ “ಸ್ವಾತಂತ್ರ್ಯಾ ನಂತರ ನಮ್ಮ ದೇಶವು ವಿವಿಧ  ಕ್ಷೇತ್ರಗಳಲ್ಲಿ ಜಾಗತಿಕ ಮಹತ್ವ ಪಡೆದ ಸಾಧನೆಗಳನ್ನು ಮಾಡುತ್ತಿದೆ. ಇಸ್ರೋದಂತಹ ಸಂಸ್ಥೆಯ ಸಾಧನೆಗಳು ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದ ಗೌರವವನ್ನು ಹೆಚ್ಚಿಸಿವೆ, ಹಾಗೆಯೇ ಕ್ರೀಡಾ ಕ್ಷೇತ್ರದಲ್ಲಿಯೂ ಸಹ ಇಂದು ನಮ್ಮ ದೇಶ ಅಂತರಾಷ್ಟ್ರೀಯ ಸಾಧನೆಗಳನ್ನು ಮಾಡುವಲ್ಲಿ ಯಶಸ್ಸನ್ನು ಕಾಣುತ್ತಿದೆ.  ವಿಶೇಷವಾಗಿ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿರುವ ಮಕ್ಕಳು ಈ ಸಾಧನೆಗಳಿಗೆ ಮುಂದಾಗುತ್ತಿದ್ದಾರೆ. ಹಾಗಾಗಿ ಇಂದು ವಿದ್ಯಾರ್ಥಿಗಳು ತಮ್ಮ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಎನ್.ಎಸ್.ಎಸ್, ಎನ್.ಸಿ.ಸಿ ಮತ್ತು ವಿವಿಧ  ಸಾಂಸ್ಕೃತಿಕ  ಕ್ಷೇತ್ರಗಳಲ್ಲಿಯೂ ಪ್ರತಿಭೆಯನ್ನು ಗಳಿಸಿಕೊಳ್ಳಬೇಕಾಗಿದೆ. ಹೀಗೆ ಗಳಿಸಿಕೊಳ್ಳುವಲ್ಲಿ ಸ್ವಯಂ ಶಿಸ್ತು, ಸಮಯ ಪಾಲನೆ, ನಿರ್ದಿಷ್ಟ ಗುರಿಗಳನ್ನು ಹೊಂದಿರುವುದು ಅತ್ಯಗತ್ಯವೆಂದು ತಿಳಿಸಿದರು.  ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಈ ಕಾಲೇಜಿನ ವಿವಿಧ ಸೌಲಭ್ಯಗಳು ಮೈಸೂರು ವಿಶ್ವವಿದ್ಯಾಲಯದ ಗೌರವವನ್ನು ಹೆಚ್ಚಿಸಿವೆ, ಸುತ್ತೂರು ಶ್ರೀಮಠದ ಆಧ್ಯಾತ್ಮಿಕ ಪರಂಪರೆ ಈ ಎಲ್ಲ ಸಾಧನೆಗಳ ಹಿಂದಣ ಶಕ್ತಿಯಾಗಿದೆ ಎಂದು ಪರಮಪೂಜ್ಯ ಜಗದ್ಗುರುಗಳವರ ಕೊಡುಗೆಗಳನ್ನು ಸ್ಮರಿಸಿದರು.

ಕಾಲೇಜಿನ ಹಿರಿಯ ವಿದ್ಯಾರ್ಥಿ ಮತ್ತು ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾ ಪಟು   ಕೆ. ಮಹದೇವ  ಮಾತನಾಡಿ  ತನ್ನೊಳಗಿದ್ದ ಕ್ರೀಡಾ ಪ್ರತಿಭೆಯನ್ನು ಕಾಲೇಜು ಗುರುತಿಸಿ ಪ್ರೋತ್ಸಾಹಿಸದೇ ಹೋಗಿದ್ದಲ್ಲಿ  ನಾನು ಶೂನ್ಯವಾಗಿರಬೇಕಾಗಿತ್ತು ಎಂದು ತಮ್ಮ ಸಾಧನೆಯ ಹಿಂದಿನ ದಿನಗಳನ್ನು ನೆನಪಿಸಿಕೊಂಡರು. ಅಂದಿಗಿಂತ ಈಗ ಕಾಲೇಜಿನಲ್ಲಿ ಕ್ರೀಡೆ ಮತ್ತು ಇತರ ಚಟುವಟಿಕೆಗಳಿಗೆ ಪೂರಕವಾದ ಅನೇಕ ಸೌಲಭ್ಯಗಳಿವೆ. ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗಳ ಶ್ರಮ ಮತ್ತು ಅದರ ಹಿನ್ನೆಲೆಗಳನ್ನು ಅರಿತುಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವವರಾಗಬೇಕಿದೆ ಎಂದು ತಿಳಿಸಿದರು.  ಭಾರತದ ಶ್ರೇಷ್ಠ ಕ್ರೀಡಾ ಪಟುಗಳಾದ ಪಿ.ಟಿ. ಉಷಾ, ಹಾಕಿಯ ಧ್ಯಾನ್ ಚಂದ್ ಅವರ ಪರಿಶ್ರಮ ಮತ್ತು ಮನೋಧರ್ಮಗಳನ್ನು ಪರಿಚಯಿಸಿದರು.

ಸಮಾರಂಭದ ಅಧ್ಯಕ್ಷೀಯ ಭಾಷಣ ಮಾಡಿದ ಕಾಲೇಜು ಸಮುಚ್ಛಯಗಳ ಕಾರ್ಯನಿರ್ವಾಹಕರಾದ ಪ್ರೊ. ಬಿ. ವಿ. ಸಾಂಬಶಿವಯ್ಯ  ಮಾತನಾಡಿ  ವಿದ್ಯಾರ್ಥಿಗಳು ಬೋಧನಾ ಕಲಿಕಯೆ ಜೊತೆಗೆ ವ್ಯಕ್ತಿತ್ವ ವಿಕಸನ ಮತ್ತು ಸೃಜನಶೀಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕಾದ ಅಗತ್ಯವಿದೆ. ಕಾಲೇಜಿನಲ್ಲಿ ಇದಕ್ಕೆ ಪೂರಕವಾದ ಎಲ್ಲ ಸೌಲಭ್ಯಗಳಿವೆ, ಪಠ್ಯೇತರ ವಿಷಯಗಳು ಸಹ ತಮ್ಮ ಭವಿಷ್ಯರೂಪಿಸುವಲ್ಲಿ ಪರಿಣಾಮಕಾರಿಯಾಗಿರುತ್ತವೆ. ಯಾವಾಗಲೂ ನಮ್ಮ ಗುರಿಗಳು ದೊಡ್ಡದಾಗಿರಬೇಕು. ಈಗ ನೀವು ಏನೇ ಆಗಿದ್ದರೂ ಮುಂದಿನ ನಿಮ್ಮ ಬೆಳವಣಿಗೆ ನಿಮ್ಮ ಪ್ರಯತ್ನಗಳ ಮೇಲೆ ಅವಲಂಬಿತವಾಗಿರುತ್ತದೆಂದು ತಿಳಿಸಿದರು, ಹಾಗೆಯೇ ಪದವಿ ನಂತರ ಲಭ್ಯವಿರುವ ಸ್ನಾತಕೋತ್ತರ ಹಾಗೂ ತದನಂತರದ ಸಂಶೋಧನಾ ಅಧ್ಯಯನಗಳು ಕುರಿತಂತೆ  ನಾಡಿನ ಇತರ ಕಡೆ ಮತ್ತು ಕಾಲೇಜಿನಲ್ಲಿರುವ ಅನುಕೂಲಗಳ ಬಗ್ಗೆ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಗಳನ್ನು ನೀಡಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯರಾದ ಪ್ರೊ. .ಎಂ. ಮಹದೇವಪ್ಪ, ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಪ್ರೊ. ಆರ್. ಸುಜಾತಾ ಕುಮಾರಿ, ದೈಹಿಕ ಶಿಕ್ಷಣ ನಿರ್ದೇಶಕರಾದ   ಎಂ. ಕಾರ್ತಿಕ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು, ವಿವಿಧ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ  ಪುರಸ್ಕಾರಗಳನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮೊದಲಿಗೆ ತೃತೀಯ ಬಿ.ಕಾಂ. ನ ವಿದ್ಯಾರ್ಥಿ ಮಹದೇವ ಪ್ರಸಾದ್ ಪ್ರಾರ್ಥಿಸಿದರು.  ಪ್ರವೀಣ್‍ಕುಮಾರ್ ಎಚ್. ಕೆ ಅಂತಿಮ ಬಿ.ಎಸ್ಸಿ ಸ್ವಾಗತಿಸಿದರು.   ಶೈಕ್ಷಣಿಕ ವರ್ಷದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ವಾರ್ಷಿಕ ವರದಿಯನ್ನು ಬಿ.ಎ ಅಂತಿಮ ವರ್ಷದ ಶ್ರೀಗಿರಿ ನಡೆಸಿಕೊಟ್ಟರು. ವೆಂಕಟೇಶ್ ತೃತೀಯ ಬಿ.ಎ ವಂದನೆ ಸಲ್ಲಿಸಿದರು,   ಸುಭಾಷಿಣಿ. ವಿ. ದ್ವಿತೀಯ ಬಿ.ಸಿ.ಎ ಕಾರ್ಯಕ್ರಮ ನಿರೂಪಿಸಿದರು.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: