ಕ್ರೀಡೆ

ಐಪಿಎಲ್: ಹ್ಯಾಟ್ರಿಕ್ ಗೆಲುವು ಸಾಧಿಸಿದ ಸನ್‌ರೈಸ​ರ್ಸ್ ಹೈದರಾಬಾದ್‌

ನವದೆಹಲಿ,ಏ.5-ಐಪಿಎಲ್ ಟೂರ್ನಿಯಲ್ಲಿ ಗುರುವಾರ ಇಲ್ಲಿನ ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್‌ರೈಸ​ರ್ಸ್ ಹೈದರಾಬಾದ್‌ 5 ವಿಕೆಟ್‌ ಗೆಲುವು ಸಾಧಿಸಿದೆ. ಈ ಜಯದೊಂದಿಗೆ ಸನ್‌ರೈಸ​ರ್‍ಸ್ ಹ್ಯಾಟ್ರಿಕ್‌ ಬಾರಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಡೆಲ್ಲಿ, 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 129 ರನ್‌ ಗಳಿಸಲಷ್ಟೇ ಶಕ್ತವಾಯಿತು. ಸುಲಭ ಗುರಿ ಬೆನ್ನತ್ತಿದ ಸನ್‌ರೈಸ​ರ್‍ಸ್ಗೆ ಜಾನಿ ಬೇರ್‌ಸ್ಟೋವ್‌ ಸ್ಫೋಟಕ ಆರಂಭ ಒದಗಿಸಿದರು. 28 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್‌ನೊಂದಿಗೆ 48 ರನ್‌ ಸಿಡಿಸಿದ ಬೇರ್‌ಸ್ಟೋವ್‌, ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ವಾರ್ನರ್‌ (10), ವಿಜಯ್‌ ಶಂಕರ್‌ (16), ಮನೀಶ್‌ ಪಾಂಡೆ (10), ದೀಪಕ್‌ ಹೂಡಾ (10) ರನ್‌ ಕೊಡುಗೆ ನೀಡಿದರು. ದಿಢೀರನೆ 3 ವಿಕೆಟ್‌ ಕಳೆದುಕೊಂಡು ಆತಂಕಕ್ಕೊಳಗಾದ ಸನ್‌ರೈಸ​ರ್‍ಸ್ಗೆ ನಬಿ ಆಸರೆಯಾದರು. 9 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್‌ನೊಂದಿಗೆ 17 ರನ್‌ ಬಾರಿಸಿ, ಇನ್ನೂ 9 ಎಸೆತ ಬಾಕಿ ಇರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮುನ್ನ ಶಿಖರ್‌ ಧವನ್‌ (12) ಹಾಗೂ ರಿಷಭ್‌ ಪಂತ್‌ (05) ವಿಕೆಟ್‌ ಕಿತ್ತ ನಬಿ, ಡೆಲ್ಲಿಗೆ ಭರ್ಜರಿ ಪೆಟ್ಟು ನೀಡಿದರು. ಪೃಥ್ವಿ ಶಾ (11), ರಾಹುಲ್‌ ತೆವಾಟಿಯಾ (05), ಕಾಲಿನ್‌ ಇನ್‌ಗ್ರಾಂ (05) ವೈಫಲ್ಯ ಕಂಡರು. ನಾಯಕ ಶ್ರೇಯಸ್‌ ಅಯ್ಯರ್‌ (43) ಏಕಾಂಗಿ ಹೋರಾಟ ನಡೆಸಿದರು. ಕೊನೆಯಲ್ಲಿ ಕ್ರಿಸ್‌ ಮೋರಿಸ್‌ (17) ಹಾಗೂ ಅಕ್ಷರ್‌ ಪಟೇಲ್‌ (23) ರನ್‌ ಗಳಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.

ಸ್ಕೋರ್‌ ವಿವರ: ಡೆಲ್ಲಿ 129/8 (ಶ್ರೇಯಸ್‌ 43, ನಬಿ 2-21, ಭುವನೇಶ್ವರ್‌ 2-27), ಸನ್‌ರೈಸ​ರ್‍ಸ್ 131/5 (ಬೇರ್‌ಸ್ಟೋವ್‌ 48, ತೆವಾಟಿಯಾ 1-10). ಪಂದ್ಯ ಶ್ರೇಷ್ಠ: ಜಾನಿ ಬೇರ್‌ಸ್ಟೋವ್‌. (ಎಂ.ಎನ್)

Leave a Reply

comments

Related Articles

error: