ಪ್ರಮುಖ ಸುದ್ದಿಮೈಸೂರು

ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವ ಪಕ್ಷ ಬೆಂಬಲಿಸಿ : ಐಎಂಎ ಮನವಿ

ಮೈಸೂರು,ಏ.5 : ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ದೇಶದ ಆರೋಗ್ಯ ಸೇವೆಗೆ ಪ್ರಾಮುಖ್ಯ ನೀಡುವ ಯಾವುದೇ ಪಕ್ಷದ ಅಭ್ಯರ್ಥಿಗೆ ಮಾತ್ರ ಮತದಾರರು ಮತ ನೀಡಬೇಕೆಂದು ಭಾರತೀಯ ವೈದ್ಯಕೀಯ ಸಂಘದ ಮೈಸೂರು ಶಾಖೆ ಮನವಿ ಮಾಡಿದೆ.

ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಎಸ್.ಪಿ. ಯೋಗಣ್ಣ, ದೇಶದಲ್ಲಿ ಪ್ರತಿ ಹತ್ತು ಸಾವಿರ ಜನಸಂಖ್ಯೆಗೆ ಒಬ್ಬ ವೈದ್ಯರಿರಬೇಕೆಂಬ ಅನುಪಾತದ ಪರಿಸ್ಥಿತಿಯಿಲ್ಲ. ಇನ್ನು, ಕೃಷಿ, ಇನ್ನಿತರ ಕೈಗಾರಿಕೆ ಮೊದಲಾದವುಗಳಿಗೆ ನೀಡುವ ಆದ್ಯತೆ, ಸಹಾಯಧನ ಮೊದಲಾದ ಸೌಲಭ್ಯಗಳು ಖಾಸಗಿ ಆಸ್ಪತ್ರೆ ನಿರ್ಮಾಣಕ್ಕೆ ಇಲ್ಲದ ಕಾರಣ ಆಸ್ಪತ್ರೆ ನಿರ್ಮಾಣ ದುಬಾರಿಯಾಗಿರುವ ಕಾರಣದಿಂದಾಗಿ ರೋಗಿಗಳಿಗೆ ಅಧಿಕ ವೆಚ್ಚ ಬೀಳುತ್ತಿದೆ.

ಇದೇ ವೇಳೆ, ಇತರೆ ಇಲಾಖೆಗಳಿಗೆ ಅದಕ್ಕೆ ಸಂಬಂಧಿಸಿದ ಐಎಎಸ್, ಐಪಿಎಸ್ ಮೊದಲಾದ ಅಧಿಕಾರಿಗಳಿದ್ದರೆ, ಆರೋಗ್ಯ ಇಲಾಖೆಗೂ ಅವರನ್ನೇ ನೇಮಕ  ಮಾಡುತ್ತಿರುವುದರಿಂದಾಗಿ ವೈದ್ಯಕೀಯ ಕ್ಷೇತ್ರದ ಸಮರ್ಪಕ ನಿರ್ವಹಣೆ ಆಗುತ್ತಿಲ್ಲ. ಹೀಗಾಗಿ ಐಎಂಎಸ್ ಎಂಬ ಹೊಸ ರೀತಿಯ ಅಧಿಕಾರಿಗಳನ್ನು ಕೇಂದ್ರವೇ ಸೃಷ್ಟಿಸಿ ನೇಮಕ ಮಾಡಿದಲ್ಲಿ, ವೈದ್ಯಕೀಯ ಕ್ಷೇತ್ರ ಸುಧಾರಿಸುತ್ತದೆ.

ಇದರೊಡನೆ ಯಾವುದಾದರೊಂದು ಕ್ಷೇತ್ರದಲ್ಲಿ ವಿಶಿಷ್ಟ ಅಧ್ಯಯನ ಅಗತ್ಯವಿರುವ ಕಾರಣ ಎಂಬಿಬಿಎಸ್ ವೈದ್ಯರಿಗೆ ಬೇಡಿಕೆ ಇಲ್ಲದಂತಾಗುತ್ತಿದೆ. ಹೀಗಾಗಿ ಅದನ್ನೂ ಮೀರಿದ ಶಿಕ್ಷಣ ಪಡೆಯಲು ಅಗತ್ಯವಾದಷ್ಟು ಪ್ರಮಾಣದಲ್ಲಿ ಸೀಟುಗಳನ್ನು ಹೆಚ್ಚಿಸಬೇಕು. ಜೊತೆಗೆ, ಸಾರ್ವಜನಿಕ ಆರೋಗ್ಯಕ್ಕೆ ಹೆಚ್ಚು ಹಣ ಮೀಸಲಿಡುವ, ಸರ್ಕಾರದ ಧನ ಸಹಾಯದೊಡೆ ಸಮಗ್ರ ಆರೋಗ್ಯ ರಕ್ಷಣೆಗೆ ಮುಂದಾಗುವುದೇ ಮೊದಲಾದ ಕ್ರಮಗಳನ್ನು ಬೆಂಬಲಿಸುವ ಅಭ್ಯರ್ಥಿಗೆ ಮತ ಹಾಕಬೇಕೆಂದು ಕೋರಿಕೊಂಡರು.

ಡಾ. ಸುರೇಶ್ ರುದ್ರಪ್ಪ, ಡಾ. ಸುಜಾತಾ ಎಸ್. ರಾವ್, ಡಾ.ಎಂ.ಎಸ್. ಜಯಂತ್, ಡಾ.ಎನ್. ಚಂದ್ರಭಾನ್ ಸಿಂಗ್ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: