ಪ್ರಮುಖ ಸುದ್ದಿ

ಬಾಲಚಂದ್ರ ಕಳಗಿ ಹತ್ಯೆ ಪ್ರಕರಣ : ಸಿಐಡಿ ತನಿಖೆಗೆ ಗೌಡ ಸಮಾಜಗಳ ಒಕ್ಕೂಟ ಆಗ್ರಹ

ರಾಜ್ಯ(ಮಡಿಕೇರಿ) ಏ.6:-  ಸಂಪಾಜೆ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷರು ಹಾಗೂ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಅವರ ಹತ್ಯಾ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದ್ದು, ಪ್ರಕರಣದ ತನಿಖೆಯನ್ನು ವಿಶೇಷ ತನಿಖಾಧಿಕಾರಿಗಳಿಗೆ ಇಲ್ಲವೆ ಸಿಐಡಿಗೆ ಒಪ್ಪಿಸಬೇಕೆಂದು ಕೊಡಗು ಗೌಡ ಸಮಾಜಗಳ ಒಕ್ಕೂಟ ಹಾಗೂ ಸುಳ್ಯದ ಗೌಡರ ಯುವ ಸೇವಾ ಸಂಘ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌಡ ಯುವ ಸೇವಾ ಸಂಘದ ಮಾಜಿ ಅಧ್ಯಕ್ಷ ಹಾಗೂ ವಕೀಲ ದಿನೇಶ್ ಮಡಪ್ಪಾಡಿ, ಬಾಲಚಂದ್ರ ಕಳಗಿ ಅವರ ಕೊಲೆಯನ್ನು ಎಲ್ಲಾ ಗೌಡ ಸಮಾಜಗಳು ತೀವ್ರವಾಗಿ ಖಂಡಿಸುತ್ತವೆ. ಈ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಇದರ ಹಿಂದೆ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದ್ದು, ಪ್ರಕರಣದ ಹಿಂದಿರುವ ಷಡ್ಯಂತ್ರವನ್ನು ಬಯಲಿಗೆಳೆಯಬೇಕೆಂದು ಒತ್ತಾಯಿಸಿದರು.

ಬಂಧನಕ್ಕೆ ಒಳಗಾಗಿರುವ ಆರೋಪಿಗಳು ಶ್ರೀಮಂತರಾಗಿದ್ದು, ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇವರ ಹಿಂದೆ ಮರಳು ಮಾಫಿಯಾ ಸೇರಿದಂತೆ ಇನ್ನೂ ಹಲವು ಮಾಫಿಯಾಗಳು ಕಾರ್ಯಾಚರಿಸಿರುವ ಸಾಧ್ಯತೆಗಳಿದೆ ಎಂದು ಆರೋಪಿಸಿದರು.

ಇದೊಂದು ಅಪಘಾತ ಪ್ರಕರಣವೆಂದು ಮೇಲ್ನೋಟಕ್ಕೆ ಕಂಡು ಬಂದಿದ್ದರು ಪೊಲೀಸರ ತನಿಖೆಯಿಂದ ಕೊಲೆ ಎಂಬುದು ದೃಢಪಟ್ಟಿದೆ. ಆದರೆ, ಪ್ರಸಕ್ತ ತನಿಖೆ ನಿಧಾನ ಗತಿಯಲ್ಲಿ ಸಾಗುತ್ತಿರುವುದರಿಂದ ಪ್ರಕರಣವನ್ನು ವಿಶೇಷ ತನಿಖಾಧಿಕಾರಿ ಇಲ್ಲವೆ ಸಿಐಡಿಗೆ ಒಪ್ಪಿಸಬೇಕು ಮತ್ತು  ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳಿಗು ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕೆಂದು ದಿನೇಶ್ ಆಗ್ರಹಿಸಿದರು.

ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಅವರು ಮಾತನಾಡಿ, ಬಾಲಚಂದ್ರ ಕಳಗಿ ಅವರು ಸಂಪಾಜೆಯಿಂದ ಸುಳ್ಯದವರೆಗೂ ಅಜಾತಶತ್ರುವಾಗಿದ್ದು, ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರಾಗಿದ್ದರು. ಮರಳು ಮಾಫಿಯಾದಿಂದಾಗಿ ಪ್ರಕರಣದ ತನಿಖೆಗೆ ಅಡ್ಡಿಯಾಗುವ ಸಾಧ್ಯತೆಗಳಿರುವ ಬಗ್ಗೆ ಜನ ವಲಯದಲ್ಲಿ ಸಂಶಯ ಮೂಡಿದೆ. ತನಿಖೆಯ ಇದುವರೆಗಿನ ಪೊಲೀಸರ ಕಾರ್ಯವೈಖರಿ ಉತ್ತಮವಾಗಿದೆ, ಆದರೆ, ಆರೋಪಿಗಳಿಗೆ ಕಾರಾಗೃಹದಲ್ಲಿ ರಾಜೋಪಚಾರ ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಪ್ರಕರಣ ಹಾದಿ ತಪ್ಪುವ ಎಲ್ಲಾ ಸಾಧ್ಯತೆಗಳಿದೆ ಎಂದು ಆರೋಪಿಸಿದರು. ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಮೋಹನ್ ರಾಂ ಸುಳ್ಯ, ಮಡಿಕೇರಿ ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಪದಾಧಿಕಾರಿ ತೇಜ ಪ್ರಸಾದ್ ಅಮೆಚೂರ್ ಹಾಗೂ ಬೆಂಗಳೂರು ಕೊಡಗು ಗೌಡ ಸಮಾಜದ ಅಧ್ಯಕ್ಷ ಅಮೆ ಸೀತಾರಾಂ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: