ಪ್ರಮುಖ ಸುದ್ದಿಮೈಸೂರು

ಕೊನೆಗೂ ಬೋನಿಗೆ ಬಿದ್ದ ಚಿರತೆ; ನಿಟ್ಟುಸಿರು ಬಿಟ್ಟ ಹೆಗ್ಗಡಹಳ್ಳಿ ನಿವಾಸಿಗಳು

ಮೈಸೂರು: ನಂಜನಗೂಡು ತಾಲೂಕು ಹೆಗ್ಗಡಹಳ್ಳಿ ಸಮೀಪ ಕಬಿನಿ ಉಪನಾಲೆಯ ನೀರಿನ ಪೈಪ್ ಬಳಿ ಅವಿತುಕೊಂಡಿದ್ದ ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಚಿರತೆ ಅವಿತು ಕೂತಿದ್ದ ವಿಷಯ ತಿಳಿದ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿ ಯಶಸ್ವಿಯಾದರು.

ಚಿರತೆಯನ್ನು ಸೆರೆ ಹಿಡಿಯಲು ಉಪಾಯ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ, ತೂಬಿನ ಒಂದು ದ್ವಾರದ ಬಳಿ ಬೋನು ಇರಿಸಿ ಮತ್ತೊಂದು ಬದಿಯಿಂದ ಹೊಗೆ ಹಾಕಿದರು. ಇದರಿಂದ ವಿಚಲಿತವಾದ ಚಿರತೆ ಆಚೆ ಬರಲು ಪ್ರಯತ್ನಪಟ್ಟು ಬೋನಿಗೆ ಬಿದ್ದು ಸೆರೆಯಾಯಿತು.

ಕಳೆದ ಒಂದು ತಿಂಗಳ ಸಮಯದಿಂದ ಉಪಟಳ ನೀಡುತ್ತಾ ಬಂದಿದ್ದ ಚಿರತೆ, ಜಾನುವಾರುಗಳ ಮೇಲೆ ದಾಳಿ ಮಾಡಿ ಭಯ ಹುಟ್ಟಿಸಿತ್ತು. ಇದಲ್ಲದೆ ಗ್ರಾಮದಲ್ಲಿ ಅಡ್ಡಾಡುತ್ತಿದ್ದ ಹಲವಾರು ನಾಯಿಗಳನ್ನು ಹೊತ್ತೊಯ್ದಿತ್ತು.

ಆಹಾರ ಅಗತ್ಯವಿದ್ದಾಗ ಓಂಕಾರ ಅರಣ್ಯ ವಲಯದಿಂದ ಆಚೆ ಬರುತ್ತಿದ್ದ ಚಿರತೆ, ಗ್ರಾಮಸ್ಥರಲ್ಲಿ ಭೀತಿ ನೆಲೆಸುವಂತೆ ಮಾಡಿತ್ತು. ಚಿರತೆ ಸೆರೆಯಾಗುತ್ತಿದ್ದಂತೆ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Leave a Reply

comments

Related Articles

error: