ಮೈಸೂರು

ಮೃಗಾಲಯದಲ್ಲಿ ಕಾರ್ಟೂನ್ ಸೆಲ್ಫಿ ಪಾಯಿಂಟ್ ಮೂಲಕ ಪ್ರವಾಸಿಗರಿಗೆ ಮತದಾನ ಜಾಗೃತಿ

ಮೈಸೂರು,ಏ. 7:- ವಿನೂತನ ರೀತಿಯಲ್ಲಿ ಮೃಗಾಲಯಕ್ಕೆ ಆಗಮಿಸುವ ಪ್ರವಾಸಿಗರಿಗೆ ಕಾರ್ಟೂನ್‍ಗಳ ಚಿತ್ರವಿರುವ ಸೆಲ್ಫಿ ಪಾಯಿಂಟ್‍ಗಳಲ್ಲಿ ಮತದಾನ ಸಂದೇಶಗಳಿರುವ ಕಾರ್ಟೂನ್ ಕಟೌಟ್ ಗಳ ಕಡೆಗೆ ಚಿಣ್ಣರನ್ನು ಆಕರ್ಷಿಸಿ ಪೋಷಕರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್‍  ತಿಳಿಸಿದರು.

ಲೋಕಸಭಾ ಚುನಾವಣೆ 2019 ರ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಚಾಮರಾಜೇಂದ್ರ ಮೃಗಾಲಯದಲ್ಲಿಂದು ಪ್ರವಾಸಿಗರಿಗೆ ಮತದಾನದ ಜವಾಬ್ದಾರಿ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಕಾರ್ಟೂನ್ ಸೆಲ್ಪಿ ಪಾಯಿಂಟ್‍ ನ್ನು   ಉದ್ಘಾಟಿಸಿ ಮಾತನಾಡಿದರು. ಪ್ರವಾಸಿಗರು ಕಾರ್ಟೂನ್ ಜೊತೆ ಮಕ್ಕಳ ಪೋಟೋ ತೆಗೆಯುವ ಸಂದರ್ಭದಲ್ಲಿ ಅವರ ಕಣ್ಣಿಗೆ ಕಾರ್ಟೂನ್ ಸೆಲ್ಫಿ ಪಾಯಿಂಟ್ ಮೇಲೆ ಬರೆದಿರುವ ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಮತದಾನ ಮಾಡೋಣ, ಆಮಿಷಗಳನ್ನ ನಿರಾಕರಿಸಿ ನಿಮ್ಮಿಷ್ಟದಂತೆ ಹಕ್ಕು ಚಲಾಯಿಸಿ ಎಂಬ ಸಂದೇಶಗಳು ಮತದಾನ ಮಾಡುವಂತೆ ಅವರನ್ನು ಪ್ರೇರೇಪಣೆ ಮಾಡುತ್ತವೆ ಎಂದರು.

ಚುನಾವಣೆಯಲ್ಲಿ ಅಕ್ರಮ ಕಂಡು ಬಂದಲ್ಲಿ ವೀಡಿಯೋ ಚಿತ್ರೀಕರಿಸಿ ಸಿ-ವಿಜಿಲ್ ಆ್ಯಪ್ ಮೂಲಕ ದೂರು ನೀಡುವ ಕಾರ್ಟೂನ್ ಹಾಗೂ ಚುನಾವಣಾ ಉಚಿತ ಸಹಾಯವಾಣಿ 1950 ಚಿತ್ರವಿದೆ. ಮತದಾರರು ಜಾಗೃತರಾಗಿ ಮತ ಚಲಾಯಿಸಿ ಎಂದರು.

ಸ್ವೀಪ್ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಜ್ಯೋತಿ ಅವರು ಮತನಾಡಿ ಜಿಲ್ಲೆಯಾದ್ಯಂತ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಥಾ, ರ್ಯಾಲಿ ಹಾಗೂ ಮನೆ ಮನೆಗೆ ತೆರಳಿ ಸ್ಟಿಕ್ಕರ್ ಅಂಟಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ಮೃಗಾಲಯದವರ ನೆರವಿನೊಂದಿಗೆ ಕಾರ್ಟೂನ್ ಸೆಲ್ಫಿ ಪಾಯಿಂಟ್‍ಗಳನ್ನು ಮೃಗಾಲಯದಲ್ಲಿ ತೆರೆದು ಮಕ್ಕಳನ್ನು ಆಕರ್ಷಿಸುವ ಮೂಲಕ ಪೋಷಕರಲ್ಲಿ ಮತದಾನ ಜಾಗೃತಿ ಮೂಡಿಸಲು ಸಹಾಯಕವಾಗಿದೆ. ಚಾಮುಂಡಿಬೆಟ್ಟ ಹಾಗೂ ಅರಮನೆಯಲ್ಲಿಯೂ ಕಾರ್ಟೂನ್ ಸೆಲ್ಫಿ ಪಾಯಿಂಟ್ ತೆರೆಯಲಾಗುವುದು.  ಈ ಮೂಲಕ ಮತದಾನ ಪ್ರಮಾಣ ಹೆಚ್ಚಳ ಮಾಡುವುದು ಸ್ವೀಪ್ ಗುರಿಯಾಗಿದೆ ಎಂದು   ತಿಳಿಸಿದರು.

ಚಿಣ್ಣರನ್ನು ಸೆಳೆದ ಕಾರ್ಟೂನ್ ಪಾಯಿಂಟ್

ಕಾರ್ಟೂನ್ ಸೆಲ್ಫಿ ಪಾಯಿಂಟ್‍ಗಳು ಮೃಗಾಲಯಕ್ಕೆ ಆಗಮಿಸಿದ ಪ್ರವಾಸಿ ಚಿಣ್ಣರನ್ನು ಮತ್ತು ಪೋಷಕರನ್ನು ತನ್ನತ್ತ ಸೆಳೆಯಿತು. ಪ್ರವಾಸಿಗರು ತಮ್ಮ ಮಕ್ಕಳೊಡನೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯಗಳು ಕಂಡು ಬಂದವು. ಸ್ವೀಪ್ ಈ ಚಿಂತನೆ ಫಲಕಾರಿಯಾಗಿದೆ.

ಈ ಸಂದರ್ಭದಲ್ಲಿ ಮೈಸೂರು ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅಜಿತ್ ಕುಲಕರ್ಣಿ, ಸ್ವೀಪ್ ಕಾರ್ಯದರ್ಶಿ ಕೃಷ್ಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಆರ್.ರಾಜು, ಸಾಂಖ್ಯಿಕ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಕಾಶ್, ಸಹಾಯಕ ಸಾಂಖ್ಯಿಕ ಅಧಿಕಾರಿ ಪ್ರವೀಣ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: