ಪ್ರಮುಖ ಸುದ್ದಿ

ಮೈತ್ರಿ ಕಾರ್ಯಾಲಯ ಉದ್ಘಾಟನೆ : ಗೆದ್ದು ಬಂದರೆ ಕಾಳುಮೆಣಸು ಆಮದು ಪ್ರಕರಣ ಬಯಲು : ವಿಜಯಶಂಕರ್ ಭರವಸೆ

ರಾಜ್ಯ(ಮಡಿಕೇರಿ) ಏ.8 : – ಸಂಸದ ಪ್ರತಾಪ ಸಿಂಹ ಅವರು ಕೇಂದ್ರದ ಸಂಬಾರ ಮಂಡಳಿ ಸದಸ್ಯರಾಗಿದ್ದರೂ ಬೆಳೆಗಾರರ ಮತ್ತು ರೈತರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಮೈಸೂರು-ಕೊಡಗು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ಟೀಕಿಸಿದ್ದಾರೆ.
ಮಡಿಕೇರಿಯಲ್ಲಿ ಆರಂಭಿಸಿರುವ ‘ಮೈತ್ರಿ ಕಾರ್ಯಾಲಯ’ದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಈ ಲೋಕಸಭಾ ಚುನಾವಣೆಯಲ್ಲಿ ತಾನು ಗೆದ್ದರೆ ಪಕ್ಷ ಭೇದವಿಲ್ಲದೆ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು. ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರ ಒಗ್ಗಟ್ಟಿನಿಂದ ಶ್ರಮ ವಹಿಸಿ ಮತದಾರರ ಮನವೊಲಿಸಿದಲ್ಲಿ ನನ್ನ ಗೆಲುವು ಖಚಿತ ಹಾಗೂ ಆ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಕರೆ ನೀಡಿದರು.
ಕೊಡಗಿನ ಪ್ರಮುಖ ಬೆಳೆಗಳಾದ ಕಾಫಿ, ಕರಿಮೆಣಸು, ಏಲಕ್ಕಿ, ಕಿತ್ತಳೆ, ಅಡಿಕೆ, ತೆಂಗು, ಭತ್ತದ ಬೆಳೆಗೆ ಸೂಕ್ತ ಬೆಲೆ ಇಲ್ಲದೆ, ಬೆಳೆಗಾರರು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ, ಅಲ್ಲದೆ, ನೈಸರ್ಗಿಕ ವಿಕೋಪಗಳಿಗೆ ಸಿಲುಕಿ ಆರ್ಥಿಕವಾಗಿ ಚೇತರಿಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಹೀಗಿದ್ದೂ, ಇಲ್ಲಿನ ಸಂಸದರು ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹಾದಿಯಲ್ಲಿ ಕಾರ್ಯನಿರ್ವಹಿಸಿಲ್ಲ. ಕೇಂದ್ರದ ಆಮದು ನೀತಿಗಳಿಂದ ಉಂಟಾಗಿರುವ ಕಾಫಿ, ಕರಿಮೆಣಸಿನ ದಾರಣೆಯ ಕುಸಿತ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲರಾಗಿರುವುದಾಗಿ ಆರೋಪಿಸಿದರು.
ತಾನು ಗೆಲುವು ಸಾಧಿಸಿದಲ್ಲಿ ಪ್ರಥಮ ಹಂತದಲ್ಲೇ ಕರಿಮೆಣಸು ಆಮದು ಪ್ರಕರಣವನ್ನು ಬಯಲಿಗೆಳೆಯುವುದಾಗಿ ವಿಜಯಶಂಕರ್ ತಿಳಿಸಿದರು.
ಕೆಪಿಸಿಸಿ ಸದಸ್ಯ ಟಿ.ಪಿ.ರಮೇಶ್ ಮಾತನಾಡಿ, ಲೋಕಸಭಾ ಚುನಾವಣೆ ಪ್ರಯುಕ್ತ ನಮ್ಮ ಪಕ್ಷದಿಂದ ಒಂದೊಂದು ಬೂತ್ ಮಟ್ಟದಲ್ಲಿಯೂ ಕಾರ್ಯಕರ್ತರ ಸಮಿತಿ ರಚಿಸಿ, ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ಮೂಲಕ ನಮ್ಮ ಅಭ್ಯರ್ಥಿಯನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಈಗಾಗಲೇ ಪಕ್ಷದ ಹೈಕಮಾಂಡ್ ಸೂಚನೆ ನೀಡಿದೆ. ಅದರಂತೆ ಎಲ್ಲರೂ ನಡೆದುಕೊಳ್ಳಬೇಕೆಂದರು.
ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿದರು. ಜೆಡಿಎಸ್ ನಗರಾಧ್ಯಕ್ಷ ರವಿಕಿರಣ್ ಪ್ರಾರ್ಥಿಸಿ, ಜಿಲ್ಲಾ ಕಾಂಗ್ರೆಸ್ ಪಕ್ಷದ ವಕ್ತಾರ ಎಸ್.ಐ.ಮುನೀರ್ ಅಹಮ್ಮದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಎಂಎಲ್‍ಸಿ ವೀಣಾ ಅಚ್ಚಯ್ಯ, ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ಮಿಟ್ಟು ಚಂಗಪ್ಪ, ಮಡಿಕೇರಿ ನಗರಾಧ್ಯಕ್ಷ ಅಬ್ದುಲ್ ರಜಾಕ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಕೊಡಗು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರ ಮೈನಾ, ಸಾಮಾಜಿಕ ಜಾಲ ತಾಣ ಸಮಿತಿಯ ಸೂರಜ್ ಹೊಸೂರು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್, ಪುಲಿಯಂಡ ಜಗದೀಶ್, ಮಡಿಕೇರಿ ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸುಖೇಶ್ ಚಂಗಪ್ಪ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಕೊಟ್ಟಕೇರಿಯನ ಅಜಿತ್, ಲೀಲಾ ಶೇಷಮ್ಮ ಮೈತ್ರಿ ಪಕ್ಷಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: