ಪ್ರಮುಖ ಸುದ್ದಿ

ಪೊಮ್ಮಕ್ಕಡ ಕೂಟದ 3ನೇ ವಾರ್ಷಿಕೋತ್ಸವ : ಬಾಲ್ಯದಿಂದಲೇ ಕೊಡವ ಭಾಷೆ ಮೇಲೆ ಹಿಡಿತ ಸಾಧಿಸಿ : ಡಾಟಿಪೂವಯ್ಯ ಕರೆ

ರಾಜ್ಯ(ಮಡಿಕೇರಿ) ಏ.9 : – ಬಾಲ್ಯದಿಂದಲೇ ಕೊಡವ ಭಾಷೆಯ ಮೇಲೆ ಹಿಡಿತ ಸಾಧಿಸಲು ಪೋಷಕರು ಮಕ್ಕಳಿಗೆ ಪ್ರೇರಣೆಯನ್ನು ನೀಡಬೇಕೆಂದು ತಿರಿ ಬೊಳಚ ಕೊಡವ ಸಂಘದ ಅಧ್ಯಕ್ಷೆ ಹಾಗೂ ಬ್ರಹ್ಮಗಿರಿ ಪತ್ರಿಕೆಯ ಉಪಸಂಪಾದಕರಾದ ಉಳ್ಳಿಯಡ ಡಾಟಿ ಪೂವಯ್ಯ ಕರೆ ನೀಡಿದ್ದಾರೆ.
ಮಡಿಕೇರಿಯ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಕೊಡವ ಸಮಾಜ ಪೊಮ್ಮಕ್ಕಡ ಕೂಟದ 3ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಲು ಪೋಷಕರು ಹೆಚ್ಚು ಕಾಳಜಿ ತೋರಬೇಕೆಂದರು. ಬಾಲ್ಯದಿಂದಲೇ ಒಂದು ಭಾಷೆಯ ಮೇಲೆ ಹಿಡಿತ ಸಾಧಿಸಿದಾಗ ಮಾತ್ರ ಆ ಭಾಷೆ ಜೀವಂತವಾಗಿ ಉಳಿಯಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ದೇಶದ ಪುರುಷ ಪ್ರಧಾನ ಸಮಾಜ ಇಂದು ಸಮಾನತೆಯ ಹಾದಿಯಲ್ಲಿ ಸಾಗುತ್ತಿದ್ದು, ಪುರುಷರಿಗೆ ನಾವೇನು ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಮಹಿಳೆಯರು ಕೂಡ ಸಂಘಟಿತರಾಗಿ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಚಾರ. ಎಲ್ಲಾ ಕ್ಷೇತ್ರಗಳಲ್ಲು ಮಹಿಳೆ ತನ್ನದೇ ಆದ ಪಾತ್ರವನ್ನು ಹೊಂದಿದ್ದು, ಸಮಾಜದಲ್ಲಿ ಗೌರವಯುತ ಸ್ಥಾನದಲ್ಲಿ ಗಮನ ಸೆಳೆಯುತ್ತಿದ್ದಾಳೆ. ಕೊಡವ ಭಾಷಾ ಸಮುದಾಯದ ಮಹಿಳೆಯರು ಒಕ್ಕೂಟ ವ್ಯವಸ್ಥೆಯಡಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂದು ಡಾಟಿಪೂವಯ್ಯ ಹರ್ಷ ವ್ಯಕ್ತಪಡಿಸಿದರು.
ಯಾರು ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಕೌಟುಂಬಿಕ ಬಾಂಧವ್ಯವನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಸ್ಥಾಪಕಾಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಮಾತನಾಡಿ, ಪೊಮ್ಮಕ್ಕಡ ಕೂಟವು 3ನೇ ವರ್ಷದ ಸಂಭ್ರಮಾಚರಣೆಯಲ್ಲಿದ್ದು, ಎಲ್ಲರೂ ಒಗ್ಗೂಡಿ ಕಾರ್ಯ ನಿರ್ವಹಿಸಲು ಕೂಟ ಹೆಚ್ಚು ಸಹಕಾರಿಯಾಗಿದೆ ಎಂದರು. ಪ್ರತಿ ವರ್ಷ ಒಕ್ಕೂಟದ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ನಾವೆಲ್ಲರೂ ಒಂದೇ ಎನ್ನುವ ಭಾವನೆ ಮೂಡುತ್ತಿದ್ದು, ಮತ್ತಷ್ಟು ಕಾರ್ಯಕ್ರಗಳನ್ನು ಹಮ್ಮಿಕೊಳ್ಳಲು ಸ್ಫೂರ್ತಿ ನೀಡಿದೆ ಎಂದು ಕವಿತಾ ತಿಳಿಸಿದರು.
ಬರಹಗಾರ್ತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರು ಪೊಮ್ಮಾಲೆ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಯಾವುದೇ ಕಾರ್ಯವನ್ನು ಕೈಗೊಳ್ಳುವ ಮೊದಲು ದೃಢ ವಿಶ್ವಾಸದೊಂದಿಗೆ ಮುನ್ನುಗ್ಗಬೇಕು, ಆಗ ಸುಲಭ ಯಶಸ್ಸು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಒಕ್ಕೂಟದ ಕಾರ್ಯದರ್ಶಿ ಬೊಳ್ಳಜಿರ ಯಮುನಾ ಅಯ್ಯಪ್ಪ ವರದಿ ವಾಚಿಸಿದರು. ಖಜಾಂಚಿ ಉಳ್ಳಿಯಡ ಸಚಿತಾ ಗಂಗಮ್ಮ ಲೆಕ್ಕಪತ್ರ ಮಂಡಿಸಿದರು.
ಬೊಪ್ಪಂಡ ಸರಳ ಮತ್ತು ತಂಡದವರು ಪ್ರಾರ್ಥನಾ ಗೀತೆ ಹಾಡಿದರು. ಚೋಕಿರ ಅನಿತಾ ಕಾರ್ಯಕ್ರಮ ನಿರೂಪಿಸಿದರು.
ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಬರಹಗಾರ್ತಿ ಕೂಪದಿರ ಸುಂದರಿ ಮಾಚಯ್ಯ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: