ಕ್ರೀಡೆ

ಗ್ರಹಾಂ ರೀಡ್ ಭಾರತದ ನೂತನ ಹಾಕಿ ಕೋಚ್

ನವದೆಹಲಿ,ಏ.9-ಭಾರತದ ಪುರುಷರ ಹಾಕಿ ತಂಡಕ್ಕೆ ನೂತನ ಮುಖ್ಯ ಕೋಚ್ ಆಗಿ ಆಸ್ಟ್ರೇಲಿಯಾದ ಗ್ರಹಾಂ ರೀಡ್ ಅವರನ್ನು ನೇಮಕ ಮಾಡಿರುವುದಾಗಿ ಹಾಕಿ ಇಂಡಿಯಾ ತಿಳಿಸಿದೆ.

ಗ್ರಹಾಂ ರೀಡ್ ಶೀಘ್ರದಲ್ಲೇ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಂಡಿರುವ ಭಾರತಿಯ ಬಳಗವನ್ನು ಕೂಡಿಕೊಳ್ಳಲಿದ್ದಾರೆ.

ಭಾರತ ಹಾಕಿ ತಂಡದ ನೂತನ ಕೋಚ್‌ ಗ್ರಹಾಂ ರೀಡ್‌, ಭಾರತ ಪುರುಷರ ಹಾಕಿ ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಂಡಿರುವುದೊಂದು ಗೌರವ ಹಾಗೂ ಭಾಗ್ಯ. ಈ ಕ್ರೀಡೆಯಲ್ಲಿ ಇತರ ಯಾವುದೇ ದೇಶದ ಸಾಧನೆಯನ್ನು ಭಾರತದೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಗ್ರಹಾಂ ರೀಡ್‌ಗೆ ಆಟಗಾರನಾಗಿ, ತರಬೇತುದಾರನಾಗಿ ಅಪಾರ ಅನುಭವವಿದೆ. ಅವರ ಅನುಭವ ಹಾಗೂ ಪರಿಣತಿ ಮುಂಬರುವ ದಿನಗಳಲ್ಲಿ, ಅದರಲ್ಲೂ ವಿಶೇಷವಾಗಿ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ನೆರವಿಗೆ ಬರಲಿದೆ ಎಂದು ಹಾಕಿ ಇಂಡಿಯಾ ಅಧ್ಯಕ್ಷ ಮೊಹಮ್ಮದ್‌ ಮುಷ್ತಾಕ್‌ ಅಹಮದ್‌ ಹೇಳಿದ್ದಾರೆ.

ಗ್ರಹಾಂ ರೀಡ್ ಆಸ್ಪ್ರೇಲಿಯಾದ ರಾಷ್ಟ್ರೀಯ ತಂಡದಲ್ಲಿ ಡಿಫೆಂಡರ್‌/ಮಿಡ್‌ಫೀಲ್ಡರ್‌ ಆಗಿ ಸಾಕಷ್ಟು ಹೆಸರುಗಳಿಸಿದ್ದಾರೆ. 1992ರ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಆಸ್ಪ್ರೇಲಿಯಾ ತಂಡದ ಸದಸ್ಯರಾಗಿದ್ದರು. 1984, 1985 ಹಾಗೂ 1989, 1990ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಜಯಿಸಿದ ಆಸ್ಪ್ರೇಲಿಯಾ ತಂಡದಲ್ಲಿದ್ದರು. ಒಟ್ಟು 130 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಸ್ಪ್ರೇಲಿಯಾವನ್ನು ಪ್ರತಿನಿಧಿಸಿದ ಹಿರಿಮೆ ಇವರಿಗೆ ಸಲ್ಲುತ್ತದೆ.

2009ರಲ್ಲಿ ಆಸ್ಪ್ರೇಲಿಯಾ ತಂಡದ ಸಹಾಯಕ ಕೋಚ್‌ ಆಗಿ ನೇಮಕಗೊಂಡಿದ್ದ ಇವರು ಕೆಲವೇ ಸಮಯದಲ್ಲಿ ಮುಖ್ಯ ಕೋಚ್‌ ಆಗಿ ಬಡ್ತಿ ಪಡೆದುಕೊಂಡರು. 2012ರಲ್ಲಿ ಆಸ್ಪ್ರೇಲಿಯಾ ತಂಡಕ್ಕೆ 5ನೇ ಬಾರಿಗೆ ಚಾಂಪಿಯನ್ಸ್‌ ಟ್ರೋಫಿ ಗೆದ್ದು ಕೊಟ್ಟ ಹೆಗ್ಗಳಿಕೆ  ಜೊತೆಗೆ 2014ರಲ್ಲಿ ಹೆಡ್‌ ಕೋಚ್‌ ಆಗಿ ಆಸ್ಪ್ರೇಲಿಯಾಕ್ಕೆ ನಂ.1 ಪಟ್ಟ ಕೊಡಿಸಿದ ಹೆಗ್ಗಳಿಕೆ ಗ್ರಹಾಂ ರೀಡ್ ಅವರಿಗೆ ಸಲ್ಲುತ್ತದೆ.

ರೀಡ್‌ ಮಾರ್ಗದರ್ಶನದಲ್ಲಿ ಆಸ್ಪ್ರೇಲಿಯಾ ತಂಡ ಆ್ಯಂಟ್ವರ್ಪ್‌ನಲ್ಲಿ ನಡೆದ ವರ್ಲ್ಡ್‌ ಲೀಗ್‌ ಸೆಮಿಫೈನಲ್‌ ಗೆದ್ದು, ಬಳಿಕ ಅದೇ ವರ್ಷ ರಾಯ್ಪುರದಲ್ಲಿ ವರ್ಲ್ಡ್‌ ಲೀಗ್‌ ಫೈನಲ್‌ ಜಯಿಸಿತ್ತು. ಆಮ್‌ಸ್ಟರ್‌ಡ್ಯಾಮ್‌ ಕ್ಲಬ್‌ನ ಮುಖ್ಯ ಕೋಚ್‌ ಆಗಿ ಕಾರ್ಯ ನಿರ್ವಹಿಸಲು 2017ರಲ್ಲಿ ನೆದರ್ಲೆಂಡ್‌ಗೆ ಪಯಣ. 1993 ಮತ್ತು 1994ರಲ್ಲಿ ಆ ಕ್ಲಬ್‌ ಪರ ರೀಡ್‌ ಆಡಿದ್ದರು. ಇತ್ತೀಚಿನ ದಿನಗಳಲ್ಲಿ ನೆದರ್ಲೆಂಡ್ಸ್‌ ತಂಡದ ಸಹಾಯಕ ಕೋಚ್‌ ಆಗಿ ಕಾಯಕ. ಇದೇ ಅವಧಿಯಲ್ಲಿ ನೆದರ್ಲೆಂಡ್ಸ್‌ ತಂಡ (2018ರಲ್ಲಿ) ಪುರುಷರ ಹಾಕಿ ವರ್ಲ್ಡ್‌ ಕಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿತ್ತು. (ಎಂ.ಎನ್)

Leave a Reply

comments

Related Articles

error: