ಕರ್ನಾಟಕಪ್ರಮುಖ ಸುದ್ದಿ

ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಿ: ಸೂಕ್ಷ್ಮ ವೀಕ್ಷಕರಿಗೆ ನಿರ್ದೇಶನ

ಮಂಡ್ಯ (ಏ.9): ಮಂಡ್ಯ ಲೋಕಸಭೆ ಸಾರ್ವತ್ರಿಕ ಚುನಾವಣೆ-2019ರ ಸಂಬಂಧ ನೇಮಕವಾಗಿರುವ ಸೂಕ್ಷ್ಮ ವೀಕ್ಷಕರು ಮತಗಟ್ಟೆಯ ಸಂಪೂರ್ಣ ಉಸ್ತುವಾರಿ ವಹಿಸಬೇಕಿರುವ ಹಿನ್ನೆಲೆಯಲ್ಲಿ ಅತ್ಯಂತ ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುಶ್ರೀ ಅವರು ನಿರ್ದೇಶನ ನೀಡಿದರು.

ಅವರು ಸೋಮವಾರ, ನಗರದ ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ಸೂಕ್ಷ್ಮ ವೀಕ್ಷಕರಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆ ಕೇಂದ್ರಗಳಿಗೆ ಸೂಕ್ಷ್ಮ ವೀಕ್ಷಕರು ನೇಮಕವಾಗುತ್ತಿದ್ದು, ಅವರು ಚುನಾವಣಾ ಪ್ರಕ್ರಿಯೆ ನಡೆಯುವ ಬಗ್ಗೆ ಹಾಗೂ ಮತಗಟ್ಟೆ ಕೇಂದ್ರಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದ ಅವರು ಮತದಾನ ಚಟುವಟಿಕೆಗಳಿಗೆ ಪೂರಕ ಅವಶ್ಯ ಸಿದ್ಧತೆಗಳಾಗಿದೆಯೇ ಎಂಬ ಬಗ್ಗೆ ನಿಗಾ ವಹಿಸಬೇಕು ಎಂದು ಅವರು ತಿಳಿಸಿದರು.

ಮತಗಟ್ಟೆಗಳಲ್ಲಿ ಸರಿಯಾದ ವೇಳೆಗೆ ಮತದಾನ ಪ್ರಕ್ರಿಯೆ ಆರಂಭ, ಅಭ್ಯರ್ಥಿ ಪರ ಏಜೆಂಟರ ಸಮ್ಮುಖದಲ್ಲಿ ಅಣುಕು ಮತದಾನ, ಅಭ್ಯರ್ಥಿಗಳ ಪರ ಏಜೆಂಟರು ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸುವ ಬಗ್ಗೆ ಪರಿಶೀಲಿಸಬೇಕು ಎಂದು ತಿಳಿಸಿದ ಅವರು ಆಯೋಗ ಸೂಚಿಸಿರುವ ದಾಖಲೆಗಳನ್ನು ಮತದಾರರಿಂದ ಪರಿಶೀಲಿಸಲಾಗುತ್ತಿದೆಯೇ ಎಂಬ ಬಗ್ಗೆ ನೋಡಿಕೊಳ್ಳಬೇಕು. ಮತದಾರರು ಅಥವಾ ಅಭ್ಯರ್ಥಿಗಳ ಪರ ಏಜೆಂಟರಿಂದ ಮತದಾನ ಪ್ರಕ್ರಿಯೆ ಅಥವಾ ಮತಗಟ್ಟೆ ಸಿಬ್ಬಂದಿ ಬಗ್ಗೆ ದೂರುಗಳು ಬರುತ್ತಿವೆಯೇ ಎಂಬ ಬಗ್ಗೆ ನಿಗಾ ವಹಿಸಬೇಕು. ಯಾವುದೇ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಚುನಾವಣಾ ವೀಕ್ಷಕರನ್ನು ಸಂಪರ್ಕಿಸಿ ಮಾಹಿತಿ ರವಾನಿಸಬೇಕು ಎಂದು ಹೇಳಿದರು.

ಮತದಾನ ಪೂರ್ಣಗೊಂಡ ಸಮಯ ಹಕ್ಕು ಚಲಾಯಿಸಿರುವ ಮತದಾರರ ಸಂಖ್ಯೆ, ಒಟ್ಟಾರೆ ಶೇಕಡಾವಾರು ಪ್ರಮಾಣ ಇನ್ನಿತರ ಮಾಹಿತಿಗಳನ್ನು ನಮೂದು ಮಾಡಬೇಕು ಎಂದು ತಿಳಿಸಿದ ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುಶ್ರೀ ಅವರು ಮತದಾನ ಅವಧಿ ಪೂರ್ಣಗೊಂಡ ಬಳಿಕ ವಿದ್ಯುನ್ಮಾನ ಮತಯಂತ್ರಗಳನ್ನು ಸರಿಯಾಗಿ ಸೀಲ್ ಮಾಡಲಾಗಿದೆಯೇ. ಏಜೆಂಟರು ನಿಗಧಿತ ನಮೂನೆಯಲ್ಲಿ ಸಹಿ ಮಾಡಿದ್ದಾರೆಯೇ ಯಾವ ವೇಳೆಯಲ್ಲಿ ಮತಗಟ್ಟೆಯಿಂದ ಅಧಿಕಾರಿ ಸಿಬ್ಬಂದಿ ನಿರ್ಗಮಿಸಿದ್ದಾರೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಬೇಕು ಎಂದಯ ಹೇಳಿದರು.

ಚುನಾವಣಾ ಆಯೋಗ ಸೂಚಿಸಿರುವ ಯಾವುದೇ ನಿಯಮ ಉಲ್ಲಂಘನೆಯಾಗಿದ್ದಲ್ಲಿ ತಿಳಿಸಬೇಕು. ಮತದಾನದಂದು ದಿನವಿಡಿ ಮತಗಟ್ಟೆಯಲ್ಲಿ ನಡೆದ ಪ್ರಕ್ರಿಯೆ ಸಂಬಂಧ ಸಂಪೂರ್ಣ ವರದಿಯನ್ನು ನೀಡುವ ಜವಾಬ್ದಾರಿ ಸೂಕ್ಷ್ಮ ವೀಕ್ಷಕರ ಮೇಲಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕರ್ತವ್ಯ ಲೋಪಕ್ಕೆ ಅವಕಾಶವಾಗದಂತೆ ಅತ್ಯಂತ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ತರಬೇತಿ ಕಾರ್ಯಕ್ರಮದಲ್ಲಿ ಸಾಮಾನ್ಯ ವೀಕ್ಷಕರಾದ ಪಿ.ಅಣ್ಣಾಮಲೈ ಹಾಗೂ ರಾಣಿ ನಗರ್, ಅಪರ ಜಿಲ್ಲಾಧಿಕಾರಿಗಳಾದ ಸದಾಶಿವನಂದ ಪ್ರಭು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. (ಎನ್.ಬಿ)

Leave a Reply

comments

Related Articles

error: