ಮೈಸೂರು

ನೋಟಾ ಭಯದಿಂದ ರಾಜಕೀಯ ಪಕ್ಷಗಳು ಸಂಭಾವಿತ ಅಭ್ಯರ್ಥಿಗಳನ್ನೇನಾದರೂ ನಿಲ್ಲಿಸಲಾರಂಭಿಸಿವೆಯೇ : ವಿಕ್ರಂ ಅಯ್ಯಂಗಾರ್

ಮೈಸೂರು,ಏ.9:- ನೋಟಾ ಭಯದಿಂದ  ರಾಜಕೀಯ ಪಕ್ಷಗಳು ಸಂಭಾವಿತ ಅಭ್ಯರ್ಥಿಗಳನ್ನೇನಾದರೂ ನಿಲ್ಲಿಸಲಾರಂಭಿಸಿವೆಯೇ ಎಂದು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಪ್ರಶ್ನಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಚುನಾವಣೆಯಲ್ಲಿ ನೋಟಾ ಮತಕ್ಕೇನು ಬೆಲೆ ?ವಿಧಾನಸಭಾ ಚುನಾವಣೆ ಸಂದರ್ಭ ಮತದಾರರು ಶೇಕಡ 50ಕ್ಕಿಂತ ಹೆಚ್ಚು ನೋಟಾ ಆಯ್ಕೆ ಮಾಡಿಕೊಂಡರೂ ಅಭ್ಯರ್ಥಿಗಳು ಪಡೆದಿರುವ ಮತಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂಬ ರಾಜ್ಯ ಮುಖ್ಯ ಚುನಾವಣಾಧಿಕಾರಿ ಹೇಳಿಕೆ  ಲೋಕಸಭಾ ಚುನಾವಣೆ ಕಾವೇರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ,

ನೋಟಾ ಬರುವ ಮೊದಲು ಮತದಾರ ತಾನು ಮತ ಚಲಾಯಿಸಬಯಸುವುದಿಲ್ಲ  ಎಂದು ಹೇಳಿ 17 (ಅ) ಫಾರಂ ಸಲ್ಲಿಸಿ ಬರಬಹುದಿತ್ತು. ಆದರೆ ಅಲ್ಲಿ ಮತ ಚಲಾಯಿಸದ ವ್ಯಕ್ತಿ ಯಾರೆಂಬುದು ಬಹಿರಂಗವಾಗುವ ಮೂಲಕ ಸಂವಿಧಾನದ ಗುಪ್ತ ಮತದಾನದ ಆಶಯಕ್ಕೆ ಭಂಗ ಆಗುತ್ತಿತ್ತು. ಆ ಕಾರಣದಿಂದ ಪರ್ಯಾಯ ಮಾರ್ಗವಾಗಿ ಬಂದ ನೋಟಾದಿಂದ ರಾಜಕೀಯ  ಸ್ವಚ್ಛವಾಯಿತೆ? ಮತದಾರರು ಹೆಚ್ಚು ಹೆಚ್ಚು ಆಸಕ್ತಿ ತೋರಿಸಿ ಮತಗಟ್ಟೆಗಳತ್ತ ಬಂದರೇ ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಇಲ್ಲ .ನೋಟಾ ಭಯದಿಂದ  ರಾಜಕೀಯ ಪಕ್ಷಗಳು ಸಂಭಾವಿತ ಅಭ್ಯರ್ಥಿಗಳನ್ನೇನಾದರೂ ನಿಲ್ಲಿಸಲಾರಂಭಿಸಿವೆಯೇ ಎಂದರೆ ಅದು ಕಾಣುವುದಿಲ್ಲ ಎಂದು ತಿಳಿಸಿದ್ದಾರೆ.

ನೋಟಾ ಮತ ಚಲಾಯಿಸುವುದರಿಂದ ಚುನಾವಣೆ ಮೇಲೆ ಆಗಬಹುದಾದ ಏಕೈಕ ಪರಿಣಾಮ ಎಂದರೆ ಸೋಲಲೇ ಬೇಕಾಗಿರುವ ಕೆಲವು ಪ್ರಜಾತಂತ್ರ ವಿರೋಧಿ. ಕ್ರಿಮಿನಲ್ ಹಿನ್ನೆಲೆಯ ಸಮಾಜ ವಿರೋಧಿ ಶಕ್ತಿಗಳ ಪರವಾಗಿರುವ ಅಭ್ಯರ್ಥಿಗಳು ಗೆಲ್ಲುವ ಅವಕಾಶ ಹೆಚ್ಚಾಗುವುದು.  ಪ್ರಸ್ತುತ ಇರುವ ನಿಯಮಗಳನ್ವಯ ನೋಟಾ ಮತಗಳು ಎಷ್ಟೇ ಇದ್ದರೂ ಅತ್ಯಧಿಕ ಮತ ಪಡೆಯುವ ಅಭ್ಯರ್ಥಿ ಗೆಲುವು ಸಾಧಿಸುತ್ತಾನೆ .ಹಾಗಾಗಿ, ಅಮೂಲ್ಯ ಮತ ಬಳಸಿ ಅವಕಾಶ ನಿರಾಕರಿಸುವ ಬದಲು ನಿಂತಿರುವ ಅಭ್ಯರ್ಥಿಗಳ ಪೈಕಿ ಸೋಲಲೇಬೇಕಾದವರ ವಿರುದ್ಧ ಮತ ಚಲಾಯಿಸುವುದು ಹೆಚ್ಚು ಪ್ರಜಾತಾಂತ್ರಿಕ ಪ್ರತಿಭಟನಾ ವಿಧಾನ  ಅನ್ನಿಸುತ್ತದೆ. ಈ ಹಿಂದೆ ಮತದಾನದಲ್ಲಿ ನೋಟಾ ಪರಿಚಯಿಸುವ ಮೂಲಕ ಪ್ರಮುಖ ಹೆಜ್ಜೆಯಿರಿಸಿದ್ದ ಚುನಾವಣಾ ಆಯೋಗ ಅಭ್ಯರ್ಥಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನೋಟಾಗೆ ಮತ ಬಿದ್ದರೂ ಹೆಚ್ಚು ಮತ ಗಳಿಸಿರುವ ಅಭ್ಯರ್ಥಿ ಗೆಲ್ಲುತ್ತಾರೆ ಎನ್ನುವ ಮೂಲಕ ನೋಟಾಗೆ ಮಹತ್ವವೇ ಇಲ್ಲದಂತೆ ಮಾಡಿದೆ ಎಂಬುದು ಮತದಾರರ ಅಸಮಾಧಾನ ಎಂದು ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: