Uncategorizedಮೈಸೂರು

ಸ್ಪರ್ಶ ಕುಷ್ಠ ಅರಿವು ಆಂದೋಲನ ಜಾಥಾ : ರೋಗದ ಕುರಿತು ಸೂಕ್ತ ತಿಳುವಳಿಕೆ ನೀಡಲು ಕರೆ

ಮೈಸೂರಿನ ನಜರ್ ಬಾದ್ ಎನ್.ಪಿ.ಸಿ ಆಸ್ಪತ್ರೆಯ ಬಳಿ ಸ್ಪರ್ಶ ಕುಷ್ಠ ಅರಿವು ಆಂದೋಲನ -2017ರ ಪ್ರಯುಕ್ತ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ವಿಭಾಗ, ಭಾರತೀಯ ವೈದ್ಯಕೀಯ ಸಂಘ, ಸಮುದಾಯ ವೈದ್ಯಶಾಸ್ತ್ರ ವಿಭಾಗ, ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಜಾಥಾಕ್ಕೆ ಸೋಮವಾರ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ  ಡಾ.ಹೆಚ್.ಬಸವನಗೌಡಪ್ಪ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಸಮಾಜದಲ್ಲಿ ಯಾವುದೇ ವ್ಯಕ್ತಿಗಳಲ್ಲಿ ಕುಷ್ಠರೋಗ ಲಕ್ಷಣಗಳಾದ ಚರ್ಮದ ಮೇಲಿನ ಸ್ಪರ್ಶ ಜ್ಞಾನವಿಲ್ಲದ ಮಚ್ಚೆ ಹಾಗೂ ಕುಷ್ಠರೋಗದಿಂದ ಉಂಟಾಗುವ ಅಂಗವಿಕಲತೆಗಳ ಕುರಿತು ನೆರೆಹೊರೆಯ ವ್ಯಕ್ತಿಗಳಿಗೆ ಸೂಕ್ತ ತಿಳುವಳಿಕೆ ನೀಡಬೇಕು ಎಂದರು. ಅವಶ್ಯಕ ಚಿಕಿತ್ಸೆ ನೀಡುವಾಗ ಭೇದ ಭಾವ ತೋರದೆ ಗೌರವಯುಕ್ತವಾಗಿ ಉಪಚರಿಸಿ, ರೋಗಿಗಳು ಗುಣಮುಖರಾಗಲು ಸಹಕರಿಸಿ. ಸಮಾಜದಲ್ಲಿ ರೋಗದ ಕುರಿತು ಸೂಕ್ತ ತಿಳುವಳಿಕೆ ನೀಡಿ ಪ್ರಾರಂಭದ ಹಂತದಲ್ಲೇ ರೋಗ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಗುಣಮುಖರಾಗುವುದಲ್ಲದೇ, ಮುಂದಾಗಬಹುದಾದ ವಿಕಲಾಂಗತೆಯನ್ನೂ ತಡೆಗಟ್ಟಬಹುದು ಎಂದು ತಿಳಿಸಿದರು.

ಈ ಸಂದರ್ಭ ಜಾಥಾದಲ್ಲಿ ಪಾಲ್ಗೊಂಡ ಶಾಲಾ-ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಬಿ.ಕೃಷ್ಣಮೂರ್ತಿ, ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ.ಸುರೇಶ್ ರುದ್ರಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಬಸವರಾಜು, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸಿ.ಸಿದ್ದರಾಜು, ಸಮುದಾಯ ವೈದ್ಯಶಾಸ್ತ್ರ ವಿಭಾಗದ ಡಾ.ಮುದಾಸಿರ್ ಅಜಿಜ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.

ಮೈಸೂರಿನ ಡಿ.ಹೆಚ್.ಓ ಕಚೇರಿಯಿಂದ ಹೊರಟ ಜಾಥಾವು ಎಸ್.ಪಿ ಕಚೇರಿ ಮಾರ್ಗವಾಗಿ, ತಾಲೂಕು ಕಚೇರಿಯಿಂದ ಗೋಪಾಲ್ ಗೌಡ ಆಸ್ಪತ್ರೆಯವರೆಗೂ ಸಾಗಿ ಮತ್ತೆ ಎನ್.ಪಿ.ಎಸ್ ಆಸ್ಪತ್ರೆಯನ್ನು ತಲುಪಿತು. ಜಾಥಾದುದ್ದಕ್ಕೂ ವಿದ್ಯಾರ್ಥಿಗಳು ಕುಷ್ಠರೋಗ ತಡೆಗಟ್ಟಿ ಗಾಂಧೀಜಿ ಕನಸು ನನಸು ಮಾಡಿ ಎಂಬ ಘೋಷಣೆಗಳನ್ನು ಕೂಗುತ್ತಾ ಸಾಗಿದರು.

Leave a Reply

comments

Related Articles

error: