ಲೈಫ್ & ಸ್ಟೈಲ್

ಕಿರಿಕಿರಿಯುಂಟು ಮಾಡುವ ನೆಗಡಿಗೆ ಮನೆಮದ್ದು

ಶೀತ-ನೆಗಡಿ ಸಾಮಾನ್ಯವಾಗಿ ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಇದು ಸಾಧಾರಣ ಸಮಸ್ಯೆಯಾದರೂ ಕೆಲವೊಮ್ಮೆ ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಈ ಸಮಸ್ಯೆಗೆ ವೈದ್ಯರು ಹೆಚ್ಚಿನ ಪ್ರಮಾಣದಲ್ಲಿ ಔಷಧಿಗಳನ್ನು ಸೇವಿಸುವುದಕ್ಕೆ ಅನುಮತಿ ನೀಡುವುದಿಲ್ಲ. ನಾವು ನೆಗಡಿಯ ಶಮನಕ್ಕೆ ಮನೆಯಲ್ಲಿಯೇ ಮದ್ದನ್ನು ತಯಾರಿಸಿಕೊಳ್ಳಬಹುದು.

ಮಸಾಲೆಯುಕ್ತ ಆಹಾರ: ಹೆಚ್ಚಿನ ಪ್ರಮಾಣದಲ್ಲಿ ಮಸಾಲೆ ಹಾಗೂ ಮೆಣಸನ್ನು ಹಾಕಿದ ಆಹಾರವನ್ನು ಸೇವಿಸುವುದರಿಂದ ಶೇಖರಣೆಯಾಗಿರುವ ಕಫ ಸುಲಭವಾಗಿ ಹೊರ ಬರಲಿದ್ದು, ಆರಾಮದಾಯಕವೆನಿಸಲಿದೆ.

ಚಿಕನ್ ಸೂಪ್ : ಬೆಚ್ಚನೆಯ ಚಿಕನ್ ಸೂಪ್ ಸೇವಿಸುವುದರಿಂದ ಗಟ್ಟಿಯಾಗಿರುವ ಕಫ ಸಡಿಲಗೊಳ್ಳುವುದಲ್ಲದೇ ಶ್ವಾಸನಾಳಗಳು ಸಡಿಲಗೊಳ್ಳುತ್ತವೆ. ಇದರಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ ಕುಡಿದರೆ ಆರೋಗ್ಯಕ್ಕೆ ಇನ್ನೂ ಒಳ್ಳೆಯದು.

ಶುಂಠಿ : 100 ಗ್ರಾಂ ಶುಂಠಿಯನ್ನು ಪುಡಿಮಾಡಿ ಅದರಲ್ಲಿ ಎರಡರಿಂದ ಮೂರು  ಚಮಚ ಜೇನುತುಪ್ಪವನ್ನು ಬೆರೆಸಿ ತಯಾರಿಸಿದ ಪೇಸ್ಟ್ ನ್ನು ದಿನಕ್ಕೆರಡು ಬಾರಿ  ಎರಡೆರಡು ಚಮಚ ಸೇವಿಸಬೇಕು.

ದ್ರಾಕ್ಷಾ ರಸ : ದ್ರಾಕ್ಷಿಯಲ್ಲಿ ನೈಸರ್ಗಿಕ ಎಕ್ಸಪೆಕ್ಟೊರೆಂಟ್ ಅಂಶವಿದ್ದು ಎರಡು ಚಮಚ ದ್ರಾಕ್ಷಾ ರಸದಲ್ಲಿ ಎರಡು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ ದಿನಕ್ಕೆ ಮೂರು ಬಾರಿ ಸೇವಿಸಬೇಕು.

ಅರಿಶಿನ : ಇದು ಆ್ಯಂಟಿಆ್ಯಕ್ಸಿಡೆಂಟ್ಸ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಒಂದು ಗ್ಲಾಸ್ ಬಿಸಿ ಹಾಲಿಗೆ ಒಂದು ಚಮಚ ಅರಿಶಿನ ಅಥವಾ ಒಂದು ಚಮಚ ಜೇನುತುಪ್ಪ ಬೆರೆಸಿ ಸೇವಿಸಿ.

ಹರ್ಬಲ್ ಟೀ : ಒಂದು ಗ್ಲಾಸ್ ನೀರಿಗೆ ಎರಡರಿಂದ ಮೂರು ಲವಂಗ, ಎರಡರಿಂದ ನಾಲ್ಕು ಕಾಳು ಮೆಣಸು, ಒಂದು ಸಣ್ಣ ಚೂರು ಶುಂಠಿ ಹಾಕಿ ಕುದಿಸಿ, ಬಳಿಕ ಕುದಿದ ಮಿಶ್ರಣದಲ್ಲಿ  ಒಂದು ಚಮಚ ಲಿಂಬುರಸ ಹಾಗೂ ಒಂದು ಚಮಚ ಜೇನುತುಪ್ಪ ಹಾಕಿ ದಿನಕ್ಕೆ ಎರಡರಿಂದ ಮೂರು ಬಾರಿ ಸೇವಿಸಿ.

ಹಿಂಗು : ಇದರಲ್ಲಿ ಸ್ವಲ್ಪ ನೀರು ಹಾಕಿ ಪೇಸ್ಟ್ ತಯಾರಿಸಿ, ಇದನ್ನು ಎದೆಯ ಮೇಲೆ ಹಚ್ಚಿ ಮಲಗಿದರೆ ಶೀತ ಕಡಿಮೆಯಾಗಲಿದೆ. ಅರ್ಧ ಚಮಚ ಹಿಂಗಿನ ಪುಡಿ, 1ಚಮಚ ಶುಂಠಿ ಪೌಡರ್, ಎರಡು ಚಮಚ ಜೇನುತುಪ್ಪ ಬೆರೆಸಿ ದಿನಕ್ಕೆ ಮೂರರಿಂದ ನಾಲ್ಕುಬಾರಿ ಸೇವಿಸಿದರೂ ಆರೋಗ್ಯಕ್ಕೆ ಒಳ್ಳೆಯದು.

ಬೆಳ್ಳುಳ್ಳಿ : ಬೆಳಿಗ್ಗೆ ಎದ್ದ ನಂತರ ಮೂರರಿಂದ ನಾಲ್ಕು ಬೆಳ್ಳುಳ್ಳಿ ಎಸಳುಗಳನ್ನು ಸ್ವಲ್ಪ ಹುರಿದು ಸೇವಿಸಿದರೆ ಇದರಲ್ಲಿರುವ ಆ್ಯಂಟಿ ಬ್ಯಾಕ್ಟಿರಿಯಾಗಳು ಕಫ ಮತ್ತು ಕೆಮ್ಮನ್ನು ಶಮನಗೊಳಿಸಲಿದೆ.

ಹಾಲು ಮತ್ತು ಕಾಳು ಮೆಣಸು : ಒಂದು ಗ್ಲಾಸ್ ಬೆಚ್ಚನೆಯ ಹಾಲಿಗೆ ಒಂದು ಚಿಟಿಕೆ ಕಾಳು ಮೆಣಸಿನ ಹುಡಿ ಹಾಗೂ ಒಂದು ಚಮಚ ಜೇನುತುಪ್ಪ ಬೆರೆಸಿ ರಾತ್ರೆ ಮಲಗುವ ಸಮಯ ಸೇವಿಸಿ.

ಇವುಗಳನ್ನು ಪಾಲಿಸಿದಲ್ಲಿ ಶೀತ ಹಾಗೂ ಕೆಮ್ಮು, ನೆಗಡಿ ನಿಮ್ಮಿಂದ ಮಾರು ದೂರವೇ ಉಳಿಯಲಿದೆ.

Leave a Reply

comments

Related Articles

error: